ಕಲಿಯುಗದ ಬಗ್ಗೆ ನಿಜವಾಗಿರುವ ಭಾಗವತ ಪುರಾಣದ 15 ಭವಿಷ್ಯಗಳು!
ಭಾಗವತ, ಅಥವಾ ಭಾಗವತ ಪುರಾಣ ಭಾರತದ 18 ಪುರಾಣಗಳಲ್ಲಿ ಒಂದು. ಜೀನವ ತತ್ವ ಹಾಗೂ ಕಾಲದ ವಿಕಾಸದ ಬಗ್ಗೆ ಭಾಗವತ ಪುರಾಣದಲ್ಲಿ ಹೇಳಲಾಗಿದ್ದು, ಕಲಿಯುಗದ ಸ್ವರೂಪದ ಬಗ್ಗೆಯೂ ಭವಿಷ್ಯ ಹೇಳಲಾಗಿದೆ.
ಕಲಿಯುಗದ ಬಗ್ಗೆ ಭಾಗವತ ಪುರಾಣದಲ್ಲಿ ಹೇಳಲಾಗಿರುವ 15 ವಿಚಾರಗಳು ಈಗ ಯಥಾವತ್ ನಡೆಯುತ್ತಿದ್ದು, ಅಚ್ಚರಿ ಮೂಡಿಸಿದೆ. ಜೀವನದ ಮೌಲ್ಯಗಳು ಮರೆಯಾಗುತ್ತಿರುವುದರ ಬಗ್ಗೆ ಈಗ ಒಂದಲ್ಲಾ ಒಂದು ಬಾರಿ ಚರ್ಚಿಸಿರುತ್ತೇವೆ, ಆದರೆ ನಾವು ಇಂದಿನ ದಿನಗಳಲ್ಲಿ ಚರ್ಚಿಸುತ್ತಿರುವ ವಿಷಯಗಳನ್ನು ನೂರಾರು ಶತಮಾನಗಳ ಹಿಂದೆ ರಚನೆಯಾಗಿದ್ದ ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ಉಲ್ಲೇಖವಾಗಿರುವ ಪ್ರಮುಖ 15 ಭವಿಷ್ಯಗಳು ಹೀಗಿವೆ
- ಕಲಿಯ ಪ್ರಭಾವದಿಂದ ಧರ್ಮ, ಸತ್ಯಸಂಧತೆ, ಶುಚಿತ್ವ, ಸಹನೆ, ಮಾನವೀಯತೆ, ಆಯುಷ್ಯ, ದೇಹದ ಶಕ್ತಿ, ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತದೆ.
- ಒಬ್ಬ ಮನುಷ್ಯನಲ್ಲಿರುವ ಸಂಪತ್ತು ಮಾತ್ರ ಆತನ ಅದೃಷ್ಟದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಸಂಪತ್ತು ಹೆಚ್ಚಿದ್ದವರು, ಅಧಿಕಾರದಲ್ಲಿರುವವರಿಗೆ ಮಾತ್ರ ನ್ಯಾಯ ಸುಲಭವಾಗಿ ಸಿಗುತ್ತದೆ.
- ಬಾಹ್ಯ ಆಕರ್ಷಣೆಗಳಿಂದಾಗಿ ಮಾತ್ರ ಹೆಣ್ಣು-ಗಂಡು ಒಟ್ಟಿಗೆ ಜೀವಿಸುತ್ತಾರೆ. ತಂತ್ರಗಳ ಮೂಲಕವೇ ಉದ್ಯಮ, ವ್ಯಾಪಾರಗಳಲ್ಲಿ ಲಾಭ ಪಡೆಯುವ ಪರಿಸ್ಥಿತಿ ಉಂಟಾಗುತ್ತದೆ. ಸ್ತ್ರೀ ಮತ್ತು ಪೌರುಷ ಗುಣಗಳು ಕೇವಲ ಲೈಂಗಿಕ ಸಾಮರ್ಥ್ಯದಿಂದ ಮಾತ್ರ ನಿರ್ಧಾರವಾಗುತ್ತದೆ. ಜನಿವಾರ ಧರಿಸಿದ ಮಾತ್ರಕ್ಕೆ ಬ್ರಾಹ್ಮಣರಾಗುತ್ತಾರೆ.
- ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಸಾಧನೆಯನ್ನು ಹೊರಗಿನ ವೇಷ ಭೂಷಣಗಳಿಂದ ಅಳೆಯುತ್ತಾರೆ. ಉತ್ತಮವಾಗಿ ಸಂಪಾದನೆ ಮಾಡದೇ ಇದ್ದವನ ಜೀವನದ ಗುರಿಯನ್ನು ಗಂಭೀರವಾಗಿ ಪ್ರಶ್ನಿಸಲಾಗುತ್ತದೆ.
- ಕೇವಲ ಪದಗಳನ್ನು ಪೋಣಿಸಿ ಮಾತನಾಡಿದರಷ್ಟೇ ಸಾಕು ಆತನನ್ನು ವಿದ್ವಾಂಸ ಎಂದು ಪರಿಗಣಿಸುತ್ತಾರೆ.
- ಹಣವಿಲ್ಲದವನನ್ನು ಅಪವಿತ್ರ ಎಂದೂ, ಬೂಟಾಟಿಕೆಯನ್ನೇ ಸದ್ಗುಣ ಎಂದು ತಿಳಿಯಲಾಗುತ್ತದೆ.
- ನೀರಿನ ಜಲಾಶಯದ ಬಳಿ ಇರುವ ಪ್ರದೇಶಗಳನ್ನು ಅತ್ಯಂತ ಪವಿತ್ರ ಕ್ಷೇತ್ರವೆಂದು ಭಾವಿಸಲಾಗುತ್ತದೆ. ಸೌಂದರ್ಯವನ್ನು ಅಳೆಯಲು ಕೇಶವಿನ್ಯಾಸವೇ ಮುಖ್ಯವಾಗುತ್ತದೆ. ಸಂಪಾದನೆಯೇ ಜೀವನದ ಪ್ರಮುಖ ಗುರಿ, ಧೈರ್ಯವಿರುವವರನ್ನು ಮಾತ್ರ ಸತ್ಯವಂತರೆಂದು ನಂಬಲಾಗುತ್ತದೆ. ಸಂಸಾರವನ್ನು ನಡೆಸುವವನು ಮಾತ್ರವೇ ಜೀವನದಲ್ಲಿ ಪಳಗಿದ ಮನುಷ್ಯ ಎಂದು ಭಾವಿಸುತ್ತಾರೆ. ಧಾರ್ಮಿಕ ತತ್ವಗಳು ಕೀರ್ತಿಯ ವಿಷಯವಾಗಿ ಮಾರ್ಪಾಡಾಗುತ್ತವೆ.
- ಈ ಎಲ್ಲಾ ಕಾರಣಗಳಿಂದಾಗಿ ಭೂಮಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಸಮಾಜದಲ್ಲಿ ಅತ್ಯಂತ ಹೆಚ್ಚು ಬಲವಿರುವವನು ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಫಲನಾಗುತ್ತಾನೆ.
- ಅತ್ಯಂತ ಹೆಚ್ಚು ತೆರಿಗೆಯಿಂದ ಅನರ್ಥ ಸಂಭವಿಸಿ, ಆಹಾರಕ್ಕೂ ಕೊರತೆ ಉಂಟಾಗುತ್ತದೆ.
- ಆತಂಕ ತೀವ್ರಗೊಳ್ಳುತ್ತದೆ. ಚಳಿ, ಗಾಳಿ, ಬಿಸಿಲು, ಮಂಜುಕವಿದ ವಾತಾವರಣ ತೀವ್ರಗೊಂಡು ಜನರು ಸಂಕಷ್ಟ ಎದುರಿಸುತ್ತಾರೆ.
- ಪುರುಷರು ಪೋಷಕರನ್ನು ರಕ್ಷಿಸುವುದಿಲ್ಲ.
- ಸ್ನೇಹ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತದೆ.
- ದೇವರ ಹೆಸರಿನಲ್ಲಿ ದಾನ ಪಡೆದು, ಕಾವಿ ಧರಿಸಿ ಹಣ ಸಂಗ್ರಹಿಸುವ ಪ್ರವೃತ್ತಿ ಹೆಚ್ಚುತ್ತದೆ. ಧರ್ಮದ ಬಗ್ಗೆ ಏನೂ ಗೊತ್ತಿಲ್ಲದೇ ಇದ್ದರೂ ಬೋಧನೆ ಮಾಡುವ ಗುರುವಿನ ಸ್ಥಾನದಲ್ಲಿರುತ್ತಾರೆ.
- ಮಾಲಿಕ ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಹಣವಿಲ್ಲದ ಮಾಲಿಕನನ್ನು ಸೇವಕ ತೊರೆಯುತ್ತಾನೆ, ಸೇವಕ ಎಷ್ಟೇ ಹಿಂದಿನ ತಲೆಮಾರುಗಳಿಂದ ನಿಷ್ಠನಾಗಿದ್ದರೂ ಅಂತವರನ್ನು ಮಾಲಿಕನೂ ಸಹ ತೊರೆಯುತ್ತಾನೆ. ಒಮ್ಮೆ ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ ಅದನ್ನು ಪರಿತ್ಯಜಿಸಲಾಗುತ್ತದೆ.
- ಕಳ್ಳರು ಹೆಚ್ಚುತ್ತಾರೆ. ರಾಜ್ಯಾಧಿಕಾರ ನಡೆಸುವವರು ಪ್ರಜೆಗಳಿಗೆ ಒಳಿತನ್ನು ಮಾಡುವುದಿಲ್ಲ!
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos