ಭಕ್ತಿ-ಭವಿಷ್ಯ

ರೋಮನ್ನರ ಹೊಸ ವರ್ಷ ಇದ್ದದ್ದೂ ನಮ್ಮ ಯುಗಾದಿಯ ಹಾಗೆ; ಮತ್ತೆ ಜನವರಿ ಹೊಸ ವರ್ಷವಾಗಿದ್ದು ಹೇಗೆ?

Srinivas Rao BV
ಹೊಸ ವರ್ಷದ ಆಚರಣೆ ವಿಷಯದಲ್ಲಿ ಭಾರತೀಯರಿಗೆ ಒಂದು ರೀತಿಯಲ್ಲಿ ಡಬಲ್ ಧಮಾಕ, ಒಂದು ಇಂಗ್ಲೀಷ್ ಕ್ಯಾಲೆಂಡರ್ ಅಥವಾ ಗ್ರಿಗೋರಿಯನ್ ಕ್ಯಾಲೆಂಡರ್ ಆದರೆ ಮತ್ತೊಂದು ಸಾಂಪ್ರದಾಯಿಕ ದೇಶಿ ಪದ್ಧತಿಯ ಯುಗಾದಿ. ಯುಗಾದಿ  ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಬಂದರೆ ಗ್ರಿಗೋರಿಯನ್ ಕ್ಯಾಲೆಂಡರ್ ನ ಹೊಸ ವರ್ಷ ಪುಷ್ಯ ಮಾಸದಲ್ಲಿ ಬರುತ್ತದೆ.
ಹೊಸ ವರ್ಷವನ್ನಾಗಿ ಆಚರಿಸುವ ಜನವರಿ ತಿಂಗಳನ್ನು ರೋಮನ್ ಕ್ಯಾಲೆಂಡರ್ ಗೆ ಸೇರಿಸಿದ್ದು ರೋಮ್ ಸಾಮ್ರಾಜ್ಯದ ನ್ಯುಮ ಪಾಂಪಿಲಿಯಸ್ ಎಂಬ ದೊರೆ, ಕ್ರಿ.ಪೂ. 700 ರಲ್ಲಿ. ಇನ್ನು ಜನವರಿಯನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭವಾಗಿದ್ದು ಕ್ರಿ.ಪೂ 450 ರಲ್ಲಿ. ರೋಮನ್ ದೊರೆ ಜನವರಿಯನ್ನು ಪ್ರಾರಂಭಿಸಿದ್ದು 10 ನೇ ತಿಂಗಳಾಗಿ. ಅದೂ ದೇವರ ಹೆಸರಿನಲ್ಲಿ ನಂತರದ ಫೆಬ್ರವರಿ ತಿಂಗಳನ್ನು ಫೆಬ್ರುಯೇರಿಸ್ ಎಂದು ತ್ಯಾಗದ ಹೆಸರಿನಲ್ಲಿ ಪ್ರಾರಂಭಿಸಿದ. ಜನವರಿ ತಿಂಗಳು ಮೊದಲು ಪ್ರಾರಂಭವಾದಾಗ ತಿಂಗಳಲ್ಲಿ ಇದ್ದದ್ದು ಕೇವಲ 30 ದಿನಗಳು ಮಾತ್ರ ಆದರೆ ನಂತರ ಬಂದ ಜೂಲಿಯಸ್ ಸೀಸರ್ ಫೆಬ್ರವರಿಯಿಂದ ಒಂದು ದಿನವನ್ನು ತೆಗೆದುಕೊಂಡು ಜನವರಿ ತಿಂಗಳಲ್ಲಿ ಒಂದು ದಿನವನ್ನು ಹೆಚ್ಚು ಮಾಡಿ 31 ದಿನಗಳನ್ನಾಗಿಸಿದ. ಇದಕ್ಕೆ ಜ್ಯೂಲಿಯಸ್ ಸೀಸರ್ ಬೆಸ ಸಂಖ್ಯೆಗಳನ್ನು ಶ್ರೇಯಸ್ಕರ ಎಂದು ನಂಬಿದ್ದರಿಂದ ಜನವರಿ ತಿಂಗಳಿಗೆ 31 ದಿನಗಳನ್ನು ಸೇರಿಸಿದ ಎಂದು ಹೇಳಲಾಗುತ್ತದೆ. ಹೊಸ ವರ್ಷದ ಜನವರಿ ತಿಂಗಳನ್ನು ರೋಮನ್ನರು ಪ್ರಾರಂಭಿಸಿದ ರೀತಿ ಹೀಗಿದೆ. 
ರೋಮ್ ಸಾಮ್ರಾಜ್ಯದ ದೊರೆಗಳು ಜನವರಿ ತಿಂಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಅಲ್ಲಿಯೂ ನಮ್ಮಲ್ಲಿ ಯುಗಾದಿ ಆಚರಣೆ ಮಾಡುವ ಆಸುಪಾಸಿನಲ್ಲೇ ಅಂದರೆ ಮಾರ್ಚ್ ತಿಂಗಳಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತಿತ್ತು. ಅಂದರೆ ಗ್ರಿಗೋರಿಯನ್ ಕ್ಯಾಲೆಂಡರ್ ನ್ನು ಪರಿಚಯಿಸಿದವರೂ ಹಿಂದೊಮ್ಮೆ ಮರಗಳು ಚಿಗುರುವ ಮಾಸದಲ್ಲೇ ಹೊಸ ವರ್ಷವನ್ನು ಆಚರಿಸುತ್ತಿದ್ದರು. ರೋಮನ್ ಕ್ಯಾಲೆಂಡರ್ ಗಳಲ್ಲಿ ಇಂದಿಗೂ ಇರುವ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳುಗಳ ಶಬ್ದಗಳು ಸಂಸ್ಕೃತ ಶಬ್ದಗಳ ಸಪ್ತ, ಅಷ್ಟ, ನವ, ದಶ ಎಂಬ ಪದಗಳಿಗೂ ಸಾಮ್ಯತೆ ಇರುವುದು ಇದಕ್ಕೆ ಪೂರಕವಾದ ಮತ್ತೊಂದು ವಿಷಯ. ರೋಮನ್ನರು ಜನವರಿ ತಿಂಗಳಲ್ಲಿ ಅತಿ ಹೆಚ್ಚು ಚಳಿ ಇರುವ ಕಾರಣದಿಂದ ರೋಮನ್ನರಿಗೆ  ಜನವರಿ ಫೆಬ್ರವರಿ ತಿಂಗಳುಗಳಿಗೆ ವಾಸ್ತವವಾಗಿ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಕಾಲಕ್ರಮೇಣ ಮನಸೋ ಇಚ್ಛೆ ಯಾವುದೇ ಗಣಿತದ ಆಧಾರ, ತರ್ಕಬದ್ಧ ವಿಚಾರಗಳಿಲ್ಲದೇ ಕ್ಯಾಲೆಂಡರ್ ನ್ನು ಪರಿಷ್ಕರಿಸಿದಂತೆಲ್ಲಾ  ಕಾಲ ನಿರ್ಣಯ ವಿಚಿತ್ರವಾಗತೊಡಗಿತು. ಇದರಿಂದ ಗೊಂದಲಕ್ಕೀಡಾಗಿ ಪಂಡಿತರ ಸಲಹೆ ಕೇಳಿದ ಜ್ಯೂಲಿಯಸ್ ಸೀಜರ್ ಗೆ ಮಾರ್ಚ್ ತಿಂಗಳನ್ನು ಬಿಟ್ಟು ಜನವರಿ ತಿಂಗಳನ್ನು ಮೊದಲ ತಿಂಗಳೆಂದು ಪರಿಗಣಿಸಬೇಕೆಂದು ಸಲಹೆ ನೀಡಲಾಗುತ್ತದೆ. ಆ ಸಲಹೆಯಂತೆ ಜೂಲಿಯಸ್ ಸೀಜರ್ ಅವಧಿಯಲ್ಲಿ ಅಂದರೆ ಕ್ರಿ.ಪೂ 450 ರಿಂದ ಜನವರಿಯನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭಿಸಲಾಗುತ್ತದೆ. 
ಜನವರಿ ಯಾವ ದಿನದಂದು ಪ್ರಾರಂಭವಾಗುತ್ತದೋ ಅದೇ ದಿನದಂದು ಅಕ್ಟೋಬರ್ ಸಹ ಪ್ರಾರಂಭವಾಗುತ್ತದೆ ಹಾಗೂ ಫೆಬ್ರವರಿ ಯಾವ ದಿನದಂದು ಕೊನೆಯಾಗುತ್ತದೋ ಅದೇ ದಿನದಂದು ಕೊನೆಯಾಗುತ್ತದೆ. ಅಧಿಕ ವರ್ಷದಲ್ಲಿ ಮಾತ್ರ ಜನವರಿ ತಿಂಗಳು ಏಪ್ರಿಲ್ ತಿಂಗಳು ಪ್ರಾರಂಭವಾದ ದಿನದಂದೇ ಪ್ರಾರಂಭವಾಗಿ ಜುಲೈ ತಿಂಗಳು ಮುಗಿಯುವ ದಿನದಂದೇ ಮುಕ್ತಾಯಗೊಳ್ಳುತ್ತದೆ ಎಂಬುದು ಮತ್ತೊಂದು ಮಜಬೂತಾದ ಸಂಗತಿಯಾಗಿದೆ. 
SCROLL FOR NEXT