ಭಕ್ತಿ-ಭವಿಷ್ಯ

ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಮಹತ್ವದ ದಿನ ಗುರು ಪೂರ್ಣಿಮೆ

Srinivas Rao BV
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸುವ ದೇವಾನು ದೇವತೆಗಳಿಗೂ ಸಹ ಗುರುವಿನ ಅಗತ್ಯವಿದೆ. ಈ ಕಾರಣದಿಂದಲೇ ಗುರುವಿಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನ.
ಗುರುವಿನ ಮಹತ್ವ, ಅಗತ್ಯ ತಿಳಿಸುವ ಮಾತೊಂದು ಹೀಗಿದೆ, ಅದೇನೆಂದರೆ ಹರ ಮುನಿದರೂ ಗುರು ಕಾಯುತ್ತಾನೆ ಎಂದು. ಅಂದರೆ ಒಂದು ವೇಳೆ ದೇವರು ನಮ್ಮ ರಕ್ಷಣೆಗೆ ಬಾರದಿದ್ದರೂ, ಅಜ್ಞಾನದಿಂದ ನಮಗೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾರೆ. ಎಷ್ಟೋ ಬಾರಿ ಗುರು ಎಂಬ ಶಕ್ತಿಗೆ ದೇವತೆಗಳೂ ಮೊರೆ ಹೋಗಿದ್ದು, ಪರಿಹಾರ ಕಂಡುಕೊಂಡಿದ್ದಾರೆ. ಅಂತಹ ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರುಪೂರ್ಣಿಮೆ ಮಹತ್ವದ ದಿನವಾಗಿದೆ. 
ಗುರುಪೂರ್ಣಿಮೆಯಂದು ಗುರುವಿನಿಂದ ಅನುಗ್ರಹ, ಉಪದೇಶ ಪಡೆದರೆ, ಯಾವುದೇ ವ್ಯಕ್ತಿಯಲ್ಲಿರುವ ಸಂದೇಹ, ಜಿಜ್ಞಾಸೆಗಳು ಬಗೆಹರಿದು ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಗುರುಪೂರ್ಣಿಮೆಯ ದಿನದಂದು, ಸದಾಶಿವ, ವಿಷ್ಣು, ವಸಿಷ್ಠ ಮಹರ್ಷಿ, ಶಕ್ತಿ ಮಹರ್ಷಿ, ಪರಾಶರ ಮಹರ್ಷಿ, ವಿಷ್ಣುವಿನ ರೂಪವಾಗಿರುವ, ವೇದಗಳನ್ನು ವಿಭಾಗಿಸಿದ ವ್ಯಾಸರಿಂದ ಮೊದಲುಗೊಂಡು, ಶುಕಾಚಾರ್ಯರಿಂದ ಮುಂದುವರೆದ ಗುರು ಪರಂಪರೆಯನ್ನು ಆಯಾ ಪರಂಪರೆ ಹಾಗೂ ಸಂಪ್ರದಾಯಗಳಿಗೆ ತಕ್ಕಂತೆ ಆರಾಧಿಸಲಾಗುತ್ತದೆ. 
ಇಷ್ಟೇ ಅಲ್ಲದೇ ಸನ್ಯಾಸಿಗಳು ಗುರುಪೂರ್ಣಿಮೆಯಂದು ವ್ರತ ಸಂಕಲ್ಪ ಮಾಡುತ್ತಾರೆ. ಸಾಮಾನ್ಯವಾಗಿ ಪರಿವ್ರಾಜಕರಾಗಿರುವ ಯತಿಗಳು ಆಷಾಢ ಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ಒಂದೇ ಪ್ರದೇಶದಲ್ಲಿದ್ದುಕೊಂಡು (ಜುಲೈ.09. ರಿಂದ ಸೆಪ್ಟೆಂಬರ್ 6 ರ ವರೆಗೆ) ಗುರುಪೂರ್ಣಿಮೆಯಂದು ಸನ್ಯಾಸಿಗಳು ನಾಲ್ಕು ತಿಂಗಳ ವ್ರತವನ್ನು ಕೈಗೊಳ್ಳುವ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ವ್ಯಾಸಪೂಜೆ ಮಾಡುವ ಮೂಲಕ ಕೈಗೊಳ್ಳುತ್ತಾರೆ.
ಚಾತುರ್ಮಾಸ್ಯ ವ್ರತ ಸಂಕಲ್ಪ ಹೇಗೆ?: 
ಅದ್ವೈತ ಪರಂಪರೆಯ ಪ್ರಕಾರ ಬ್ರಹ್ಮವಿದ್ಯೆಯನ್ನು ತಿಳಿಸುವ ಗುರುಗಳಾದ ಮೂವರು ಆಚಾರ್ಯಗಳ ಪಂಚಕಗಳಿಗೆ ಷೋಡಶೋಪಚಾರ ಪೂಜೆ ನೆರವೇರಿಸುವ ಮೂಲಕ ವ್ಯಾಸಪೂಜೆ ಪ್ರಾರಂಭವಾಗುತ್ತದೆ. ವ್ಯಾಸಪೂಜೆ ವೇಳೆ  ಬ್ರಹ್ಮಚಾರಿಗಳಾದ ಸನಕ, ಸನಂದನ, ಸನತ್ಸುಜಾತ ಮತ್ತು ಸನತ್ಕುಮಾರರು ಅನುಕ್ರಮವಾಗಿ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ದಿಕ್ಕುಳಲ್ಲಿದ್ದು, ಮಧ್ಯದಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿರುವ ಕೃಷ್ಣ ಪಂಚಕಕ್ಕೆ ಪೂಜೆ ನೆರವೇರುತ್ತದೆ.
ನಂತರ ವೇದವ್ಯಾಸ ಪಂಚಕದಲ್ಲಿ, ವೇದವ್ಯಾಸರು ಮಧ್ಯದಲ್ಲಿರಲಿದ್ದು, ಅವರ ನಾಲ್ಕು ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ, ಸಮನ್ತರಿರುವ ವ್ಯಾಸ ಪಂಚಕಕ್ಕೆ ಪೂಜೆ ನಡೆಯಲಿದೆ. 
ವ್ಯಾಸ ಪಂಚಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಆದಿಶಂಕರರ ಪಂಚಕಕ್ಕೆ ಪೂಜೆ ನಡೆಯಲಿದ್ದು, ಕೇಂದ್ರ ಭಾಗದಲ್ಲಿ ಆದಿ ಶಂಕರರು, ಸುತ್ತಲೂ ಅವರ ಶಿಷ್ಯರಾದ ಹಸ್ತಾಮಲಕಾಚಾರ್ಯರು, ಸುರೇಶ್ವರಾಚಾರ್ಯರು, ಪದ್ಮಪಾದಾಚಾರ್ಯರು, ತೋಟಕಾಚಾರ್ಯರಿರುವ ಪಂಚಕಕ್ಕೆ ಪೂಜೆ ನಡೆಯಲಿದೆ. ಈ ಮೂರು ಪಂಚಕಗಳಿಗೆ ಪೂಜೆ ಸಲ್ಲಿಸಿದ ಬಳಿಕ ಯತಿಗಳು ಆದಿ ಶಂಕರರಿಂದ ಪ್ರಾರಂಭವಾಗಿ ಅವರ ಹಿಂದಿನ ಗುರುಗಳವರೆಗೆ ನಡೆದು ಬಂದಿರುವ ಗುರುಪರಂಪರೆಗೆ ಪೂಜೆ ಸಲ್ಲಿಸಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. 
SCROLL FOR NEXT