ಭಕ್ತಿ-ಭವಿಷ್ಯ

ಕರ್ನಾಟಕದಲ್ಲಿದೆ ಗುರುಗಳ ಗುರು ದತ್ತಾತ್ರೇಯರು ನೆಲೆಸಿರುವ ಶ್ರೀಕ್ಷೇತ್ರ! ಅದು ಯಾವುದು ಗೊತ್ತಾ?

Srinivas Rao BV
ಸನಾತನ ಧರ್ಮದಲ್ಲಿ ಗುರುವಿಗೆ ಎಲ್ಲದಕ್ಕಿಂತ ಶ್ರೇಷ್ಠ ಸ್ಥಾನವಿದೆ. ಹಾಗಾಗಿಯೇ ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಲಾಗಿದೆ. ಅಂತಹ ಗುರುವಿಗೇ ಗುರುವಾಗಿರುವವರು ದತ್ತಾತ್ರೇಯರು. ಗುರು ದತ್ತಾತ್ರೆಯರು ನೆಲೆಸಿರುವ ಕ್ಷೇತ್ರ  ಕರ್ನಾಟಕದ  ಕಲ್ಬುರ್ಗಿ ಜಿಲ್ಲೆಯ ಗಾಣಗಾಪುರದಲ್ಲಿದ್ದು, ಅದನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ.
ಅತ್ರಿ ಮಹರ್ಷಿಗಳು ತ್ರಿಮೂರ್ತಿಗಳ ಕುರಿತು ತಪಸ್ಸು ಮಾಡಿ ತ್ರಿಮೂರ್ತಿಗಳ ಅಂಶವಿರುವ ಮಗ ಹುಟ್ಟಿ ಬರಬೇಕೆಂದು ಪ್ರಾರ್ಥನೆ ಮಾಡಿದ್ದರು. ಹಾಗಾಗಿಯೇ ಅತ್ರಿ ಮಹರ್ಷಿಗಳಿಗೆ ತ್ರಿಮೂರ್ತಿಗಳ ಅಂಶವಿರುವ ದತ್ತಾತ್ರೇಯರು ಮಗನಾಗಿ ಜನಿಸಿದರು. ಯಾವುದೇ ತತ್ವವನ್ನು ಸ್ಪಷ್ಟವಾಗಿ ಅರಿಯಬೇಕಾದರೆ, ಅಥವಾ ಆ ತತ್ವದ ಮೇಲೆ ಹಿಡಿತ ಸಾಧಿಸಬೇಕಾದರೆ ಗುರುವಿನ ಪಾತ್ರ ಅತ್ಯಂತ ಮುಖ್ಯವಾದದ್ದು. ಆದ್ದರಿಂದಲೇ ಪ್ರತ್ಯಕ್ಷ ದೈವ ಹಾಗೂ ಎಲ್ಲಕ್ಕೂ ಮಿಗಿಲಾದ ತತ್ವರೂಪನಾದ ಗುರುವನ್ನು ಆಶ್ರಯಿಸಬೇಕು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಅಂತಹ ಶ್ರೇಷ್ಠ ಗುರುಗಳು ತ್ರಿಮೂರ್ತಿಗಳ ಸ್ವರೂಪರಾದ ದತ್ತಾತ್ರೇಯರು.
ಆದ್ದರಿಂದ ದತ್ತಾತ್ರೇಯರನ್ನು ಆದಿ ಗುರು ಎಂದೂ ಪೂಜಿಸುತ್ತಾರೆ. ಇನ್ನು ದತ್ತಾತ್ರೇಯರ ತತ್ವ ದತ್ತಾದ್ವೈತ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಬೇಧ ಬುದ್ಧಿಯನ್ನು ತೋರದ ತತ್ವವೇ ದತ್ತಾತ್ರೇಯರ ಹಾಗೂ ದತ್ತಾದ್ವೈತ ತತ್ವದ ವಿಶೇಷವಾಗಿದೆ. ಉಪನಿಷತ್ ಗಳಲ್ಲಿರುವ ಇದೇ ತತ್ವ ಮುಂದಿನ ದಿನಗಳಲ್ಲಿ ಸಮಾಜ ಸುಧಾರಣೆಗಾಗಿ ಆವಿರ್ಭವಿಸಿದ ಶಂಕರರ ಅದ್ವೈತ ತತ್ವದ ಪ್ರತಿಪಾದನೆಗೂ ಆಧಾರವಾಗಿದೆ.
ದತ್ತಾತ್ರೇಯರ ಅವತಾರವೆನ್ನಲಾದ ನರಸಿಂಹ ಸ್ವರಸ್ವತಿ ಸ್ವಾಮಿಗಳು ಗಾಣಗಾಪುರದಲ್ಲಿ ನೆಲೆಸಿದ್ದರು. ಆದ್ದರಿಂದ ಗಾಣಗಾಪುರವನ್ನು ದತ್ತಾತ್ರೇಯರ ಕ್ಷೇತ್ರವೆನ್ನಲಾಗುತ್ತದೆ. ಗುರು ಚರಿತ್ರೆಯಲ್ಲಿ ನರಸಿಂಹ ಸರಸ್ವತಿಗಳು ತಾವು ಸದಾ ಈ ಕ್ಷೇತ್ರದಲ್ಲಿ ಜಾಗೃತವಾಗಿ ನೆಲೆಸಿರುವುದಾಗಿ ಉಲ್ಲೇಖವಿದೆ. ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರವಾಗಿರುವ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುವುದು ಈ ಕ್ಷೇತ್ರದ ಮತ್ತೊಂದು ವೈಶಿಷ್ಟ್ಯ. ಗುರು ಚರಿತ್ರೆಯಲ್ಲಿ ನರಸಿಂಹ ಸರಸ್ವತಿಗಳು ಹೇಳಿರುವಂತೆ ಇಂದಿಗೂ ದತ್ತಾತ್ರೇಯರ ಸ್ವರೂಪವಾಗಿರುವ ನರಸಿಂಹ ಸರಸ್ವತಿಗಳು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ, ಆದ್ದರಿಂದ ಗಾಣಗಾಪುರದಲ್ಲಿ ಪಾದುಕೆಯ ಪೂಜೆ ನೆರವೇರಿಸಿದರೆ ದತ್ತಾತ್ರೇಯರ ಕೃಪೆ ಉಂಟಾಗಿ ಮನೋಭಿಲಾಶೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
SCROLL FOR NEXT