ಹಿಂದೂ ಪಂಚಾಂಗದ ಪ್ರಕಾರ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷಗಳು ಚಾಂದ್ರಮಾನ ಮಾಸದ ಎರಡು ಭಾಗಗಳಾಗಿವೆ, ಇವು ಚಂದ್ರನ ವೃದ್ಧಿ ಮತ್ತು ಕ್ಷೀಣಿಸುವಿಕೆಯನ್ನು ಸೂಚಿಸುತ್ತವೆ. ನಮ್ಮ ಹಿಂದೂ ಪಂಚಾಗದ ಪ್ರಕಾರ 12 ಮಾಸಗಳಿವೆ(ತಿಂಗಳು). ಈ ಮಾಸಗಳನ್ನು ಶುಕ್ಲಪಕ್ಷ ಮತ್ತು ಕೃಷ್ಣಪಕ್ಷ ಎಂದು ವಿಂಗಡಿಸಲಾಗಿದೆ. ಈ ಪಕ್ಷಗಳ ಪ್ರಾರಂಭದ ಹಿಂದೆ ಒಂದು ಪುರಾಣ ಕಥೆಯಿದೆ.
ಒಂದು ಪಕ್ಷ ಅಥವಾ ಪಕ್ಷವು ಒಂದು ತಿಂಗಳಲ್ಲಿ 15 ತಿಥಿಗಳ ಸಂಯೋಜನೆಯಿರುತ್ತದೆ. ಆದ್ದರಿಂದ, ಪ್ರತಿ ಮಾಸವೂ ಎರಡು ಪಕ್ಷಗಳನ್ನು ಹೊಂದಿರುತ್ತದೆ
ಶುಕ್ಲ ಪಕ್ಷ : ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ( ಈ ಸಮಯದಲ್ಲಿ ಚಂದ್ರನ ವೃದ್ಧಿಯಾಗುತ್ತಾನೆ)
ಕೃಷ್ಣ ಪಕ್ಷ : ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ, ಈ ಸಮಯದಲ್ಲಿ ಚಂದ್ರ ಕ್ಷೀಣಿಸುತ್ತಾನೆ.
ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಗೆ 27 ಜನ ಹೆಣ್ಣು ಮಕ್ಕಳಿದ್ದರು. ಅವರನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದ್ದರು. ಆ 27 ಹೆಣ್ಣು ಮಕ್ಕಳಲ್ಲಿ ರೋಹಿಣಿ ಅತ್ಯಂತ ಸುಂದರವಾಗಿದ್ದಳು. ಚಂದ್ರನು ಅವಳನ್ನು ಹೆಚ್ಚು ಪ್ರೀತಿಸುತ್ತಿದ್ದ. ಉಳಿದ ಹೆಂಡತಿಯರನ್ನು ನಿರ್ಲಕ್ಷಿಸುತ್ತಿದ್ದ. ಇದರಿಂದ ಬೇಸತ್ತ ಉಳಿದ ಹೆಣ್ಣು ಮಕ್ಕಳು ತಂದೆಗೆ ದೂರುಕೊಟ್ಟರು. ದಕ್ಷನು ಚಂದ್ರನನ್ನು ಕರೆಸಿ ಎಲ್ಲಾ ಹೆಂಡತಿಯರನ್ನು ಒಂದೇ ಸಮನಾಗಿ ಕಾಣಬೇಕೆಂದು ಆದೇಶಿಸಿದನು. ಆದರೆ, ಚಂದ್ರನು ತನ್ನ ಬುದ್ದಿಯನ್ನು ಬಿಡಲಿಲ್ಲ. ಆಗ ಕೋಪಗೊಂಡ ದಕ್ಷನು ನೀನು ತುಂಬಾ ಸುಂದರವಾಗಿದ್ದೀಯಾ ಎಂಬ ಅಹಂಕಾರವಿದೆ, ಆದ್ದರಿಂದ ನಿನ್ನ ಸುಂದರವಾದ ಕಾಯ ಕ್ಷಯವಾಗಲಿ ಎಂದು ಶಾಪ ಕೊಟ್ಟನು. ಶಾಪ ವಿಮೋಚನೆಯ ಉಪಾಯಕ್ಕಾಗಿ ಚಂದ್ರ ಬ್ರಹ್ಮನ ಬಳಿ ಹೋದನು. ಆಗ ಬ್ರಹ್ಮ, ಚಂದ್ರ ನೀನು ಶಿವನನ್ನು ಆರಾಧಿಸು, ತಪಸ್ಸು ಮಾಡು ಅವನೇ ನಿನ್ನ ಶಾಪಕ್ಕೆ ಪರಿಹಾರ ಕೊಡುವನು ಎಂದನು.
ಚಂದ್ರನು ಹಲವಾರು ವರ್ಷಗಳ ಕಾಲ ಶಿವನಿಗಾಗಿ ತಪಸ್ಸು ಮಾಡಿದನು. ಶಿವನು ಪ್ರತ್ಯಕ್ಷನಾಗಿ ದಕ್ಷನ ಶಾಪವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ನನ್ನ ವರದಿಂದ ನೀನು ವೃದ್ಧಿಗೊಳ್ಳುವೆ. ನೀನು ತಿಂಗಳಲ್ಲಿ 15 ದಿನ ಅಂದರೆ ಅಮಾವಾಸ್ಯೆ ಮಾರನೆ ದಿನದಿಂದ ಹುಣ್ಣಿಮೆ ದಿನದವರೆಗೆ ವೃದ್ಧಿಗೊಳ್ಳುವೆ. ಇದನ್ನು ಶುಕ್ಷ ಪಕ್ಷ ಎಂದು ಕರೆಯವರು. ಹುಣ್ಣಿಮೆಯ ಮಾರನೆ ದಿನದಿಂದ ಅಮವಾಸ್ಯೆವರೆಗೆ ಕ್ಷಯಿಸುವೆ ಇದನ್ನು ಕೃಷ್ಣ ಪಕ್ಷ ಎಂದು ಕರೆಯುತ್ತಾರೆ ಎಂದು ಚಂದ್ರನಿಗೆ ವರವನ್ನು ಕೊಟ್ಟನು ಅಂದಿನಿಂದ ಈ ಶುಕ್ಷ ಪಕ್ಷ ಮತ್ತು ಕೃಷ್ಣ ಪಕ್ಷ ಆರಂಭವಾಯಿತು ಎಂಬ ಪ್ರತೀತಿಯಿದೆ.
ಹಿಂದೂ ಆಚರಣೆಗಳು, ಉಪವಾಸಗಳು ಮತ್ತು ಹಬ್ಬಗಳನ್ನು ತಿಥಿಗಳ ಪ್ರಕಾರ ಆಚರಿಸಲಾಗುತ್ತದೆ. ಉದಾಹರಣೆಗೆ, ಏಕಾದಶಿ ವ್ರತಂ, ಷಷ್ಠಿ, ಅಷ್ಟಮಿ, ಅಮವಾಸ್ಯೆ ಮತ್ತು ಪೌರ್ಣಮಿಯಂತಹ ದಿನಗಳು ವಿಶೇಷ ಪೂಜೆಗಳು ಮತ್ತು ಆಚರಣೆಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಆದ್ದರಿಂದ, ಪಂಚಾಂಗದಲ್ಲಿ ತಿಥಿಗಳನ್ನು ನಿರ್ಧರಿಸುವುದು ಅತ್ಯಂತ ಮಹತ್ವದ್ದಾಗಿದೆ.
ತಿಥಿ ಎಂದರೆ ಚಂದ್ರನ ದಿನವಾಗಿದ್ದು, ಇದು ಹಿಂದೂ ಪಂಚಾಂಗದ ಐದು ಅಂಗಗಳಲ್ಲಿ ಒಂದಾಗಿದೆ. ಚಂದ್ರನು ಸೂರ್ಯನ ಸುತ್ತ ಒಂದು ನಿರ್ದಿಷ್ಟ ಕೋನದಲ್ಲಿ (ಪ್ರತಿ 12 ಡಿಗ್ರಿ) ಚಲಿಸಲು ತೆಗೆದುಕೊಳ್ಳುವ ಸಮಯವನ್ನು ಒಂದು ತಿಥಿ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳಲ್ಲಿ 30 ತಿಥಿಗಳಿರುತ್ತವೆ, ಇವುಗಳನ್ನು ಎರಡು ಪಕ್ಷಗಳಾಗಿ ವಿಂಗಡಿಸಲಾಗಿದೆ: ಪಾಡ್ಯದಿಂದ ಹುಣ್ಣಿಮೆಯವರೆಗೆ ಇರುವ 15 ತಿಥಿಗಳಿಗೆ ಶುಕ್ಲ ಪಕ್ಷ (ಚಂದ್ರನ ಬೆಳವಣಿಗೆಯ ಅವಧಿ) ಮತ್ತು ಪಾಡ್ಯದಿಂದ ಅಮಾವಾಸ್ಯೆಯವರೆಗೆ ಇರುವ 15 ತಿಥಿಗಳಿಗೆ ಕೃಷ್ಣ ಪಕ್ಷ (ಚಂದ್ರನ ಕ್ಷೀಣಿಸುವ ಅವಧಿ) ಎಂದು ಕರೆಯಲಾಗುತ್ತದೆ.
ಪ್ರತಿಯೊಂದು ತಿಥಿಯು ತನ್ನದೇ ಆದ ಜ್ಯೋತಿಷ್ಯ ಮಹತ್ವವನ್ನು ಹೊಂದಿದೆ ಮತ್ತು ನಿರ್ದಿಷ್ಟ ಆಚರಣೆಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದೆ.
ಚಂದ್ರನು ಸೂರ್ಯನಿಂದ 12 ಡಿಗ್ರಿ ಪೂರ್ವಕ್ಕೆ ಚಲಿಸಿದಾಗ, ಅದು ಮೊದಲ ತಿಥಿಯಾದ 'ಪ್ರತಿಪದ' ಅಥವಾ 'ಪಾಡ್ಯ'ದ ಪ್ರಾರಂಭವನ್ನು ಸೂಚಿಸುತ್ತದೆ. ಇದೇ ರೀತಿ, ಚಂದ್ರನು 360 ಡಿಗ್ರಿ ಚಲಿಸಿದಾಗ ಮತ್ತೆ ಅಮಾವಾಸ್ಯೆ ಬರುತ್ತದೆ. ತಿಥಿಯ ಆಧಾರದ ಮೇಲೆ ಶುಭ ಮತ್ತು ಅಶುಭ ಸಮಯಗಳನ್ನು ನಿರ್ಧರಿಸಲಾಗುತ್ತದೆ ಮತ್ತು ಶುಭ ಕಾರ್ಯಗಳನ್ನು ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ.
ಪ್ರತಿ ಪಕ್ಷಕ್ಕೆ 15 ತಿಥಿಗಳಿವೆ: ಪ್ರತಿಪದ, ದ್ವಿತೀಯ, ತೃತೀಯಾ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಪೌರ್ಣಮಿ/ಅಮಾವಾಸಿ.
ಪೌರ್ಣಮಿ ಮತ್ತು ಅಮವಾಸ್ಯೆ ತಿಥಿಗಳು ಕ್ರಮವಾಗಿ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಕೊನೆಯ ದಿನಗಳಾಗಿವೆ, ಪ್ರತಿಯೊಂದು ತಿಥಿಗೂ ಒಬ್ಬ ದೇವತೆ ಇರುತ್ತಾನೆ. ವಿವಿಧ ತಿಥಿಗಳನ್ನು ಆಳುವ ದೇವತೆಗಳನ್ನು ಅರ್ಥಮಾಡಿಕೊಳ್ಳುವುದು ಆಯಾ ತಿಥಿಗಳ ಶಕ್ತಿ ಮತ್ತು ಕಂಪನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಶುಕ್ಲ ಪಕ್ಷದಲ್ಲಿ ಮದುವೆ ಉಪನಯನ ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡಿದರೆ ಹೆಚ್ಚು ಫಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ. ಶುಕ್ಲ ಪಕ್ಷದಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರಿರುತ್ತಾರೆ. ಕೃಷ್ಣ ಪಕ್ಷದಲ್ಲಿ ಜನಿಸಿದವರು ಮಂದ ಬುದ್ಧಿ ಉಳ್ಳವರು ಎಂದೂ ಸಹ ಶಾಸ್ತ್ರ ಹೇಳುತ್ತದೆ.
ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ