ನವರಾತ್ರಿ ಹಬ್ಬದ 5ನೇ ದಿನದ ದುರ್ಗಾ ದೇವಿಯ 5ನೇ ರೂಪವಾದ ಸ್ಕಂದಮಾತೆಯನ್ನು ಪೂಜಿಸಲಾಗುವುದು. ಸ್ಕಂದಮಾತಾ ದೇವಿಯು ತನ್ನ ಭಕ್ತರನ್ನು ಸ್ವಂತ ಮಕ್ಕಳಂತೆ ರಕ್ಷಿಸುತ್ತಾಳೆ, ಪ್ರೀತಿ - ವಾತ್ಸಲ್ಯವನ್ನು ನೀಡುತ್ತಾಳೆ ಎಂದು ಹೇಳಲಾಗಿದೆ.
ಸ್ಕಂದಮಾತಾ ದೇವಿಯನ್ನು ಪೂಜಿಸುವುದರಿಂದ ಭಕ್ತರು ಮೋಕ್ಷವನ್ನು ಪಡೆದುಕೊಳ್ಳುತ್ತಾರೆ. ದುರ್ಗಾ ದೇವಿಯ 5ನೇ ಅವತಾರವು ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ.
ದೇವಿ ಸ್ಕಂದ ಮಾತೆಯು ತನ್ನ ಮೇಲಿನ ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಸಿಂಹದ ಮೇಲೆ ಕುಳಿತಿರುವ ಸ್ಕಂದಮಾತೆಯು ತನ್ನ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾಳೆ. ತಾಯಿ ರೂಪದಲ್ಲಿ ಆಕೆ ಪ್ರೀತಿ, ಸಹಾನುಭೂತಿ, ವಿನಮ್ರತೆ, ಸಂತೋಷ ಮತ್ತು ಕರುಣೆಯನ್ನು ನೀಡುತ್ತಾಳೆ. ಸ್ಕಂದಮಾತೆ ದೇವಿಯನ್ನು ಮಾತೃತ್ವದ ಸಂಕೇತವಾಗಿದ್ದಾಳೆ.
ಸ್ಕಂದಮಾತೆಯ ಕಥೆ
ಕಾರ್ತಿಕೇಯನ ಜನನವು ಒಂದು ಕುತೂಹಲಕಾರಿ ಕಥೆಯಾಗಿದೆ. ಸತಿ ಆತ್ಮಾಹುತಿ ಮಾಡಿಕೊಂಡ ನಂತರ, ಶಿವನು ಲೌಕಿಕ ವ್ಯವಹಾರಗಳಿಂದ ದೂರವಾಗಿ ತಪಸ್ವಿಯಾಗಿ ಕಠಿಣ ತಪಸ್ಸನ್ನು ಮಾಡಲು ಪ್ರಾರಂಭಿಸಿದನು. ಅದೇ ಸಮಯದಲ್ಲಿ, ದೇವರುಗಳು (ದೇವತೆಗಳು) ಸುರಪದ್ಮನ್ ಮತ್ತು ತಾರಕಾಸುರರಿಂದ ನಡೆಸಲ್ಪಡುತ್ತಿದ್ದ ರಾಕ್ಷಸರ ದಾಳಿಗೆ ಒಳಗಾದರು.
ಜನರು ಶಿವನ ಬಳಿಗೆ ಹೋಗಿ ತಾರಕಾಸುರನನ್ನು ಸಂಹಾರ ಮಾಡುವಂತೆ ಪ್ರಾರ್ಥಿಸಿದರು. ಶಿವ ಪಾರ್ವತಿಯನ್ನು ವಿವಾಹವಾಗುವ ಮೂಲಕ ಕಾರ್ತಿಕೇಯ ಎನ್ನುವ ಗಂಡು ಮಗುವಿಗೆ ತಂದೆಯಾಗುತ್ತಾನೆ. ಕಾರ್ತಿಕೇಯ ಬೆಳೆದಾಗ, ಅವನು ರಾಕ್ಷಸ ತಾರಕಾಸುರನನ್ನು ಕೊಂದನು. ಈಕೆ ಸ್ಕಂದನ ತಾಯಿಯಾದ್ದರಿಂದ ಕಾರ್ತಿಕೇಯ, ಅವಳನ್ನು ಸ್ಕಂದಮಾತೆ ಎಂದು ಕರೆದನು. ಅಂದಿನಿಂದ ಪ್ರತೀ ನವರಾತ್ರಿಯಲ್ಲೂ ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ.
ಪೂಜೆ, ನೈವೇದ್ಯ
ಸ್ಕಂದಮಾತಾ ದೇವಿಗೆ ಬಾಳೆಹಣ್ಣನ್ನು ಅರ್ಪಿಸಲಾಗುತ್ತದೆ. ಈ ದಿನ, ದೇವಿಗೆ ಬಾಳೆಹಣ್ಣಿನ ಪಾಯಸ, ಬಾಳೆಹಣ್ಣಿನ ಸಿಹಿತಿಂಡಿಗಳು ಅಥವಾ ಬಾಳೆಹಣ್ಣಿನ ಪುಡಿಂಗ್ ಅನ್ನು ಅರ್ಪಿಸುವುದರಿಂದ ಅವಳು ಸಂತೋಷಪಡುತ್ತಾಳೆ ಎನ್ನುವ ನಂಬಿಕೆಯಿದೆ. ಹಣ್ಣುಗಳು, ಸಿಹಿತಿಂಡಿಗಳು, ಸಕ್ಕರೆ ಮಿಠಾಯಿ ಮತ್ತು ಪಾಯಸವನ್ನು ದೇವಿಗೆ ಅರ್ಪಿಸಬಹುದು. ನವರಾತ್ರಿಯ ಐದನೇ ದಿನ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಶುಭ. ಸ್ಕಂದಮಾತಾ ದೇವಿಗೆ ನೀವು ಕಮಲದ ಹೂವು, ಗುಲಾಬಿ ಹೂವು ಮತ್ತು ದಾಸವಾಳದ ಹೂವುಗಳನ್ನು ಅರ್ಪಿಸಬೇಕು.