ವಾಹನ

ಕೊಲಬಾ ಕಾಣು ಬಾ

ವೀರಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜನ ಸಾಹಸವನ್ನು ಬಿಂಬಿಸುವ ಹಲವು ಕೋಟೆ-ಕೊತ್ತಲಗಳು..

ವೀರಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜನ ಸಾಹಸವನ್ನು ಬಿಂಬಿಸುವ ಹಲವು ಕೋಟೆ-ಕೊತ್ತಲಗಳು ಮಹಾರಾಷ್ಟ್ರದಲ್ಲಿವೆ. ಕೆಲವು ಕೋಟೆಗಳು ಕೊಂಕಣದ ದುರ್ಗಮ ಬೆಟ್ಟಗಳಲ್ಲಿದ್ದರೆ, ಇನ್ನು ಕೆಲವು ಸಮುದ್ರಾಭಿಮುಖವಾದ ಕೋಟೆಗಳೂ ಇವೆ. ಈ ಸಮುದ್ರಾಭಿಮುಖ ಕೋಟೆಗಳು ಶಿವಾಜಿಯ ನೌಕಾನೆಲೆಗಳು. ಹಡಗು ನಿರ್ಮಾಣ ಕೇಂದ್ರ ಹಾಗೂ ವ್ಯಾಪಾರಿ ತಾಣಗಳ ರಕ್ಷಣೆಗಾಗಿ ನಿರ್ಮಿಸಿದವು. ಅದರಲ್ಲಿ ಪ್ರಮುಖವಾದುದು ರಾಯಗಢ ಜಿಲ್ಲೆಯ ಆಲೀಬಾಗ್ ಕೋಟೆ.
ಕೊಲಬಾ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ 26 ಕಿ.ಮೀ. ಸಮುದ್ರ ಮಾರ್ಗವಾಗಿ ಸಾಗಿದರೆ ತಲುಪಬಹುದು ಅಥವಾ ರಸ್ತೆ ಮುಖೇನ ಪನ್ವೇಲ್ನಿಂದ ಸುಮಾರು 50 ಕಿ.ಮೀ ಸಾಗಬೇಕು. ಸಮುದ್ರ ದಂಡೆಯಿಂದ ಅರ್ಧ ಕಿ.ಮೀ ದೂರದ ನಡುಗಡ್ಡೆಯಲ್ಲಿ ನಿರ್ಮಿತವಾಗಿರುವ ಈ ಭವ್ಯ ಕೋಟೆಯನ್ನು ಸಮುದ್ರದಲ್ಲಿ ಇಳಿತವಿದ್ದಾಗ ಕಾಲ್ನಡಿಗೆಯಲ್ಲಿ ಅಥವಾ ಕುದುರೆ ಬಂಡಿಗಳಲ್ಲಿ ತಲುಪಬಹುದು. ಸಮುದ್ರದಲ್ಲಿ ಏರಿಕೆಯಿದ್ದಾಗ ದೋಣಿಗಳಲ್ಲಿ ಸಾಗಬೇಕು. ಸುಮಾರು 300 ಮೀ ಉದ್ದ ಹಾಗೂ 200 ಮೀ ಅಗಲಕ್ಕೆ ಹರಡಿರುವ ಈ ಕೋಟೆಯಲ್ಲಿ 6ರಿಂದ 7 ಮೀ ಎತ್ತರವಿರುವ 17 ಬುರುಜುಗಳಿವೆ. ಇವುಗಳಲ್ಲಿ 5 ಬುರುಜುಗಳು ಸಮುದ್ರಾಭಿಮುಖವಾಗಿರುವುದು ವಿಶೇಷ. ಹರಡಿರುವ ಘನಗಂಭೀರ ಶರಧಿ, ಹಾಗೂ ಬುರುಜುಗಳನ್ನು ನೋಡುವಾಗ 'ನರಪಿಳ್ಳೆ ನೀ ಬರಿಯ ನೀರ್ಗುಳ್ಳೆ' ಎಂಬ ವಿ.ಕೃ.ಗೋಕಾಕ್‌ರ ನುಡಿ ನೆನಪಾಗುತ್ತದೆ.
ಕೋಟೆಯ ಮುಖ್ಯದ್ವಾರ, ಸಮುದ್ರ ದಂಡೆಯ ಈಶಾನ್ಯ ದಿಕ್ಕಿನಲ್ಲಿದ್ದು, ಕೋಟೆ ಪ್ರವೇಶಿಸಿದೊಡನೆಯೇ ಮಹಿಷಾಸುರಮರ್ದಿನಿಯ ಚಿಕ್ಕ ಗುಡಿಯನ್ನು ನೋಡಬಹುದು. ಅದರ ಎಡಭಾಗದಲ್ಲಿ ಭವಾನಿದೇವಿಯ ಗುಡಿಯೂ ಇದೆ. ಒಳಭಾಗದಲ್ಲಿ ನಾನಿ ಸಾಹೇಬ್ ಅರಮನೆಯ ಅವಶೇಷಗಳನ್ನು ನೋಡಬಹುದು. ಭಾರೀ ಬೆಂಕಿ ದುರಂತಕ್ಕೆ ಸಿಲುಕಿ ಈ ಅರಮನೆ ನಾಶವಾಯಿತು ಎಂದು ಹೇಳಲಾಗುತ್ತದೆ.
ಈ ಅರಮನೆಯಲ್ಲಿ ಈ ಕೋಟೆಯ ಸರದಾರ, ಶಿವಾಜಿಯ ನೌಕಾಪಡೆಯ ಮುಖ್ಯಸ್ಥ ಕಾನೋಜಿ ಆಂಗ್ರೆ ಹಾಗೂ ಆತನ ಪತ್ನಿ ನಾನಿ ಸಾಹೇಬ್ ವಾಸವಿದ್ದರು. ಅದರ ಪಕ್ಕದಲ್ಲೇ ನಂತರ ನಿರ್ಮಾಣವಾದ ತೋರ್ಲಾ ವಾಡಾ ಅಥವಾ ದೊಡ್ಡ ಅರಮನೆಯ ಅವಶೇಷಗಳೂ ಇವೆ. ಅಗ್ನಿ ದುರಂತದಲ್ಲಿ ನಾಶವಾದ ಈ ಅರಮನೆಯು ಐದು ಮಹಡಿಯ ಕಟ್ಟಡವಾಗಿತ್ತು. ಕೋಟೆಯ ಪೂರ್ವದಲ್ಲಿ ಸಿಹಿನೀರಿನ ಕೊಳವಿರುವುದು ವಿಶೇಷ. ಸುತ್ತುವರಿದಿರುವ ಉಪ್ಪಿನ ಜಲರಾಶಿಯ ಮಧ್ಯದಲ್ಲಿ ಸಿಹಿನೀರು ಲಭ್ಯವಿರುವುದು ಪ್ರಕೃತಿಯ ವಿಸ್ಮಯವೆಂದೇ ಹೇಳಬೇಕು. ಈ ಕೊಳದ ಮುಂಭಾಗದಲ್ಲಿ ಈ ದ್ವೀಪ ಕೋಟೆಯ ಮುಖ್ಯ ದೇವಸ್ಥಾನ, ಗಣಪತಿ ಪಂಚಾಯತನ ಮಂದಿರವಿದೆ. ಇದರಲ್ಲಿ ಗಣಪತಿ, ಮಹಾದೇವ, ವಿಷ್ಣು, ಸೂರ್ಯ ಹಾಗೂ ದೇವಿಯರ ವಿಗ್ರಹಗಳಿವೆ.
ಈ ದೇವಾಲಯದ ಉತ್ತರಕ್ಕೆ ಹನುಮಪ್ಪನ ಚಿಕ್ಕ ಗುಡಿಯೂ ಇದೆ. ನಮ್ಮ ಕಡೆಯ ದೇವಾಲಯಗಳಲ್ಲಿ ಈಶ್ವರನ ಎದುರು ನಂದಿ ವಿಗ್ರಹವಿರುವಂತೆ ಇಲ್ಲಿ ದೇವರ ಮುಂದೆ ಅಮೃತ ಶಿಲೆಯ ಆಮೆ ಇರುವುದು ವಿಶೇಷ. ದೇವಾಲಯದ ದಕ್ಷಿಣಕ್ಕೆ ತುಳಸೀ ವೃಂದಾವನವೂ ಇದೆ. ಸಮುದ್ರಾಭಿಮುಖವಾಗಿರುವ ಬುರುಜುಗಳಲ್ಲಿ ಬ್ರಿಟಿಷರ ಕಾಲದ ಯುದ್ಧ ತೋಪುಗಳನ್ನು ನೋಡಬಹುದು. ಸಮುದ್ರದಲ್ಲಿ ಬರುವ ಶತ್ರು ನೌಕೆಗಳ ಮೇಲಿನ ದಾಳಿಗಾಗಿ ಇರಿಸಿದಂತವು.
ಸಾಹಸ ಪ್ರವೃತ್ತಿಯ ಶಿವಾಜಿ ಮಹಾರಾಜನ ಮಹತ್ವಾಕಾಂಕ್ಷೆ, ದೂರದೃಷ್ಟಿತ್ವವನ್ನು ಸಾರಿ ಹೇಳುವಂತಿರುವ ಈ ಕೋಟೆ ಈಗ ಅವಶೇಷವಾಗಿದ್ದರೂ ಸಮುದ್ರದ ತಟದಲ್ಲಿ ಮುಳುಗುವ ಸೂರ್ಯನನ್ನು ನೋಡುತ್ತಾ ಐತಿಹಾಸಿಕ ಕ್ಷಣಗಳನ್ನು ಮೆಲುಕು ಹಾಕಬಹುದು. ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ವಹಣೆಯಲ್ಲಿರುವ ಈ ಕೋಟೆ ಮುಂಬೈ ಪ್ರವಾಸಕ್ಕೆ ಹೋದವರನ್ನು ಕೈಬೀಸಿ ಕರೆಯುತ್ತದೆ. ಮಾನ್ಸೂನ್ ಹೊರತುಪಡಿಸಿ ಬೇರೆ ದಿನಗಳಲ್ಲಿ ಮುಂಬೈಯ ಗೇಟ್ ವೇ ಆಫ್ ಇಂಡಿಯಾದಿಂದ ಫೆರ್ರಿ (ದೋಣಿ) ಗಳಲ್ಲಿ ಹೋಗಿಬರಬಹುದಾದ್ದರಿಂದ ಸಮುದ್ರ ಪ್ರಯಾಣದ ಆನಂದವನ್ನೂ ಅನುಭವಿಸಬಹುದು.

- ಎಚ್.ಎಸ್.ನವೀನಕುಮಾರ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ