ವಾಹನ

ಹಾರ್ಸ್ಲಿ ಬೆಟ್ಟ

ಹಚ್ಚ ಹಸಿರಿನ ಮುಸುಕು ಹೊದ್ದು ಬಾನೆತ್ತರಕ್ಕೆ ಮುತ್ತಿಡುವ ಈ 4152 ಅಡಿ ಎತ್ತರದ ಹಾರ್ಸ್ಲಿ ಬೆಟ್ಟ ಬೆಂಗಳೂರಿನಿಂದ 140 ಕಿ.ಮೀ. ದೂರದಲ್ಲಿದೆ. ಇದು ತಂಗಾಳಿಯ ತವರು...

ಬೇಸಗೆಯ ರಜಾದಿನಗಳಲ್ಲಿ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರಸಿದ್ಧ ಗಿರಿಧಾಮ ಆಂಧ್ರಪ್ರದೇಶದ ಹಾರ್ಸ್ಲಿ ಬೆಟ್ಟ. ಹಚ್ಚ ಹಸಿರಿನ ಮುಸುಕು ಹೊದ್ದು ಬಾನೆತ್ತರಕ್ಕೆ ಮುತ್ತಿಡುವ ಈ 4152 ಅಡಿ ಎತ್ತರದ ಬೆಟ್ಟ ಬೆಂಗಳೂರಿನಿಂದ 140 ಕಿ.ಮೀ. ದೂರದಲ್ಲಿದೆ. ಕರ್ನಾಟಕ- ಆಂಧ್ರಗಳ ನೈಋತ್ಯ ಗಡಿಯಲ್ಲಿರುವ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ 24 ಕಿ.ಮೀ.ಗಳಷ್ಟು ಸನಿಹವಿದೆ. ತಿರುಪತಿಯಿಂದ ಇಲ್ಲಿಗೆ 114 ಕಿ. ಮೀ.ದೂರ.
ಇಲ್ಲಿ ದಟ್ಟ ಕಾಡಿದೆ. ಸದಾ ತಂಗಾಳಿಯ ನರ್ತನ. ಹೀಗಾಗಿ ಸೂರ್ಯನ ಕಾವು ನಡು ಹಗಲಲ್ಲೂ ತಣ್ಣಗೆಯೇ ಇರುತ್ತದೆ. ಸೂರ್ಯಾಸ್ತದ ದೃಶ್ಯವಂತೂ ಅವರ್ಣನೀಯ. ಶತಮಾನಗಳ ಹಿಂದೆ ಇದು ಹಾರ್ಸ್ಲಿ ಬೆಟ್ಟವಾಗಿರಲಿಲ್ಲ. ಅನಾದಿಯ ಹೆಸರು ಎನುಗು ಮಲ್ಲಮ್ಮನ ಕೊಂಡವಾಗಿತ್ತು. ಬುಡಕಟ್ಟು ಜನರಿಗೆ ಔಷಧಿ ನೀಡುತ್ತ ಅವರ ಬದುಕಿಗೆ ನೆರವಾಗಿದ್ದ ಮಲ್ಲಮ್ಮ ಎಂಬ ಹುಡುಗಿ ಅವರೊಂದಿಗೆ ಬಹುಕಾಲ ನೆಲೆಸಿದ್ದಳು. ಇದ್ದಕ್ಕಿದ್ದಂತೆ ಅವಳು ಮಾಯವಾದಾಗ ಗಿರಿಜನರು ಅವಳಿಗೊಂದು ದೇಗುಲ ಕಟ್ಟಿಸಿ ಬೆಟ್ಟಕ್ಕೆ ಅವಳ ಹೆಸರನ್ನಿಟ್ಟರು. ಇಲ್ಲಿರುವ ಆ ದೇಗುಲವೂ ಪ್ರವಾಸೀ ಆಕರ್ಷಣೆಗಳಲ್ಲೊಂದು. 1840-43ರಲ್ಲಿ ಕಡಪಾ ಜಿಲ್ಲೆಯ ಅಧಿಕಾರಿಯಾಗಿದ್ದ ಡಬ್ಲ್ಯು.ಡಿ. ಹಾರ್ಸ್ಲಿ ಇಲ್ಲಿಗೆ ಭೇಟಿ ನೀಡಿದಾಗ ಬೆಟ್ಟದ ಪ್ರಕೃತಿ ಸೌಂದರ್ಯದಿಂದ ಆಕರ್ಷಿತನಾದ. ಇಲ್ಲೊಂದು ಬಂಗಲೆ ನಿರ್ಮಿಸಿದ. ಬಳಿಕ ಬೆಟ್ಟಕ್ಕೆ ಹಾರ್ಸ್ಲಿ ಲೇಕ್ ಎಂಬ ಹೆಸರಾಯಿತು. ಈಗ ಬೇಸಿಗೆಯಲ್ಲಿ ರಾಜ್ಯಪಾಲರು ವಿಹಾರಕ್ಕೆ ಬಂದು ಈ ಬಂಗಲೆಯಲ್ಲಿ ತಂಗುವ ಕಾರಣ ಅವನು ಕಟ್ಟಿಸಿದ ಬಂಗಲೆಗೆ 'ಗವರ್ನರ್ ಬಂಗಲೆ' ಅಂತಾರೆ.
ಅಗಲ ಕಿರಿದಾದ ಬೆಟ್ಟಗಳ ದಾರಿಯಲ್ಲಿ ವಾಹನದ ಮೂಲಕ ಏರುವಾಗ ದಟ್ಟ ಮರಗಳ ರಮ್ಯ ನೋಟ ಮನ ಸೆಳೆಯುತ್ತದೆ. ಬೆಟ್ಟದಲ್ಲಿ ನೀಲಗಿರಿ, ಗುಲ್‌ಮೊಹರ್, ಜಕರಂದ್, ಮಹಾಗನಿ ಮತ್ತು ಶ್ರೀಗಂಧದ ಮರಗಳ ನೆಡುತೋಪುಗಳಿವೆ. 150 ವರ್ಷಗಳ ಹಿಂದೆ ನಿರ್ಮಿಸಲಾದ ವಿಶಾಲ ಕಲ್ಯಾಣಿಯಲ್ಲಿ ತುಂಬಿದ ಸ್ಫಟಿಕ ಜಲವಿದೆ. ಕಾಡಿನಿಂದ ಸದಾ ಸಂಪಿಗೆ ಮೊದಲಾದ ಹೂಗಳ ಸುಗಂಧ ತೇಲಿ ಬರುತ್ತದೆ. ಬಿದಿರು, ಟೀ ಮತ್ತು ಬೀಡಿ ಎಲೆಗಳ ಗಿಡಗಳಂಥ ಅಪರೂಪದ ಸಸ್ಯಗಳೂ ಅಲ್ಲಿವೆ. ಆನೆ, ಕಾಡುನಾಯಿ, ಕರಡಿ, ಕಾಡುಕೋಳಿ, ಹಂದಿ ಮೊದಲಾದ ವನ್ಯಜೀವಿಗಳ ದರ್ಶನವೂ ಆಗುತ್ತದೆ.
ಪರಿಸರ ಸಂರಕ್ಷಣೆಯ ಧ್ಯೇಯದಿಂದ ನಿರ್ಮಾಣವಾದ ಪರಿಸರ ಪಾರ್ಕ್ ಕೂಡ ಈ ವಿಹಾರಧಾಮದಲ್ಲಿದೆ. ಬಲಿಜೆಪಲ್ಲಿ ವೆಂಕಟಸುಬ್ಬರಾವ್ ಎಂಬವರ ಕಾಳಜಿಯಿಂದ ಅದು ಹುಟ್ಟಿಕೊಂಡಿದೆ. ಹಾಗೆಯೇ ಅಪೂರ್ವ ವಸ್ತುಗಳ ಮ್ಯೂಸಿಯಂ ಇದೆ. ಮೈಕ್ರೋವೇವ್ ವೀಕ್ಷಣಾ ಕೇಂದ್ರವಿದ್ದು, ಅದರ ಮೂಲಕ ಪರಿಸರದ ವೀಕ್ಷಣೆ ಒಂದು ರೋಮಾಂಚಕಾರಿ ಅನುಭವ ನೀಡುತ್ತದೆ. ಇಲ್ಲಿ ಚಾರಣಕ್ಕೆ ಅವಕಾಶವಿದೆಯಾದರೂ ತಂಡದಲ್ಲಿ 20 ಮಂದಿಗೆ ಮಾತ್ರ ಹೋಗಬಹುದು. ವಸತಿ ಸೌಲಭ್ಯಕ್ಕೆ ರೆಸಾರ್ಟ್ ಮತ್ತು ಹೋಟೆಲ್‌ಗಳಿವೆ. ಆದರೆ ಬೇಸಿಗೆಯಲ್ಲಿ ಮುಂಗಡವಾಗಿ ಸ್ಥಳ ಕಾದಿರಿಸಬೇಕಾಗುತ್ತದೆ. ರು. 750ರಿಂದ 1500 ತನಕ ದೈನಿಕ ಬಾಡಿಗೆಗೆ ಕೊಠಡಿಗಳು ಲಭ್ಯ.

= ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ