ತಿರುವನಂತಪುರ: ಕೇರಳ ಪ್ರವಾಸೋಧ್ಯಮ ಇಲಾಖೆ 12 ವರ್ಷಗಳಿಗೊಮ್ಮೆ ಕಂಡುಬರುವ ವಿಶೇಷ ನೀಲ ಕುರಿಂಜಿ ಹೂವಿಗೆ ಸ್ವಾಗತ ಕೋರಲು ಸಿದ್ಧತೆ ನಡೆಸಿಕೊಂಡಿದೆ.
ಸಾಮಾನ್ಯವಾಗಿ ಪಶ್ಚಿಮಘಟಗಳಲ್ಲಿ ಕಂಡುಬರುವ ಈ ವಿಶಿಷ್ಠ ನೀಲ ಕುರಿಂಜಿ ಹೂಗಳು ಇದೀಗ ಕೇರಳದ ಮುನ್ನಾರ್ ನಲ್ಲಿ ಕಂಡುಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನೀಲಕುರಂಜಿಯು ಹೊರನೋಟಕ್ಕೆ ತೀರಾ ಸಾಮಾನ್ಯವಾದ ಸಣ್ಣ ಕುರುಚಲು ಸಸ್ಯ, 1300ರಿಂದ 2400 ಮೀಟರ್ ಎತ್ತರದ ಬೆಟ್ಟ ಶ್ರೇಣಿಗಳ ಕಣಿವೆಗಳಲ್ಲಿ ಇದು ಬೆಳೆಯುತ್ತದೆ. 30ರಿಂದ 60 ಸೆಂ.ಮೀ. ಎತ್ತರ ಬೆಳೆಯುವ ಈ ಪೊದರು ಸಸ್ಯವನ್ನು ವೈಜ್ಞಾನಿಕವಾಗಿ ಸ್ಟ್ರೋಬಿಲ್ಯಾಂಥಸ್ ಕುಂತಿಯಾನ ಎಂದು ಕರೆಯಲಾಗುತ್ತದೆ. ಅಂತೆಯೇ ಈ ವಿಶೇಷ ಸಸ್ಯವನ್ನು ಅಕಾಂಥೇಸೀ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.
ಕುರಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತವೆ. ಅವುಗಳಲ್ಲಿ 46 ಜಾತಿಯವು ಭಾರತದಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಕೆಲವು ಜಾತಿಗಳು 12 ವರ್ಷಗಳ ಬದಲಿಗೆ 16 ವರ್ಷಗಳಿಗೊಮ್ಮೆ ಅರಳುತ್ತವೆ. ದೀರ್ಘ ಕಾಲಕ್ಕೊಮ್ಮೆ ಅರಳುವ ಈ ತೆರನಾದ ಹೂವುಗಳನ್ನು "ಪಿಲಿಟೆಸಿಯಲ್ಸ್' ಎನ್ನುವರು. ಪ್ರಸ್ತುತ ಕೇರಳದ ಮುನ್ನಾರ್ ನಲ್ಲಿ ಈ ಹೂಗಳು ಕಂಡುಬಂದಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ನೀಲಕುರಂಜಿ ಯೌವನದ ಪರಿಶುದ್ಧ ಪ್ರೇಮದ ಪ್ರತೀಕವೂ ಆಗಿದ್ದು, ತಮಿಳು ನಾಡಿನ ನೀಲಗಿರಿ, ಪಳನಿ, ಅಣ್ಣಾಮಲೈಗಳನ್ನು ಒಳಗೊಂಡಂತೆ ನೀಲ ಕುರಿಂಜ ಪ್ರದೇಶದ ಒಡೆಯನೇ ಮುರುಗ, ಬೆಟ್ಟಗಾಡಿನ ತರುಣಿ "ವಲ್ಲಿ'ಯನ್ನು ಮುರುಗ ವರಿಸಿದಾಗ ನೀಲಕುರಿಂಜಿಯ ಹಾರವನ್ನು ಮುರುಗ ಧರಿಸಿದ್ದನಂತೆ ಎಂಬ ಐತಿಹ್ಯವಿದೆ. ಕೊಡೈಕೆನಾಲ್‌ನಲ್ಲಿ ಮುರುಗನೇ ಆರಾಧ್ಯ ದೈವವಾದ "ಕುರಿಂಜಿ ಆಂಡವರ್' ದೇವಸ್ಥಾನವಿದೆ.
ಕರ್ನಾಟಕದಲ್ಲೂ ಕಂಡುಬರುವ ನೀಲ ಕುರಿಂಜಿ
ಇನ್ನು ಕೇರಳ ಮಾತ್ರವಲ್ಲದೇ ಪಶ್ಚಿಮಘಟ್ಟಗಳ ಭಾಗವಾಗಿರುವ ಕರ್ನಾಟಕದಲ್ಲೂ ಈ ವಿಶೇಷ ಹೂ ಕಂಡುಬರುತ್ತದೆ. ಬಳ್ಳಾರಿಯ ಸಂಡೂರಿನ ಪರ್ವತ ಶ್ರೇಣಿಯಲ್ಲಿ ಸೆಪ್ಟೆಂಬರ್ ನಲ್ಲಿ ಈ ನೀಲಿ ಪುಷ್ಪವು ಕಂಡುಬರುತ್ತದೆ. ಹೂವುಗಳು ಜೇನ್ನೊಣ, ದುಂಬಿಗಳನ್ನು ಆಕರ್ಷಿಸಿ ಪರಾಗಸ್ಪರ್ಶಗೊಂಡು ತದನಂತರ ಹೂಗಳು ಬಾಡಿ ನೆಲಕ್ಕೆ ಉರುಳುತ್ತವೆ. ಆಗ ತೆನೆಗಳಲ್ಲಿ ಬೀಜಗಳು ಫಲಿತಗೊಳ್ಳುತ್ತವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos