2016

ಬೀಫ್ಸ್ 2016: ಸಿನಿಮೋತ್ಸವ ಪಾಸ್ ಗಳಿಂದ 10 ಲಕ್ಷ ಗಳಿಕೆ

Vishwanath S
ಬೆಂಗಳೂರು: ಎಂಟನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಮುಖ ಘಟ್ಟಕ್ಕೆ ತಲುಪಿದ್ದು, ಸಿನಿಮೋತ್ಸವದ ಸಮಾರೋಪ ಸಮಾರಂಭ ನಾಳೆ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರು ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಬಾಬು ಅವರು, 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅರಮನೆ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಚಿತ್ರರಂಗ ಎಲ್ಲಾ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದರು. 
ಮೈಸೂರು ಕನ್ನಡ ಚಿತ್ರಗಳ ಬುನಾಧಿ ಎಂದು ಹೇಳಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಲಂಡನ್ ನಿಂದ ಕ್ಯಾಮೆರಾವೊಂದನ್ನು ತರಿಸಿ ಅರಮನೆ ಮುಂದೆ ನಾಟಕವೊಂದನ್ನು ಚಿತ್ರೀಸಿ ತಮ್ಮ ಹಿತೈಷಿಗಳಿಗೆ ಅದನ್ನು ತೋರಿಸುವ ಮೂಲಕ ಕನ್ನಡ ಚಿತ್ರಗಳ ಉಗಮವಾಯಿತು ಎಂದರು. ಸಿನಿಮೋತ್ಸವದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರ ಪ್ರದರ್ಶನಗೊಂಡವು ಎಂದು ಬಾಬು ಅವರು ಹೇಳಿದ್ದಾರೆ. 
ಸಿನಿಮೋತ್ಸವಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ದೆಹಲಿ, ಬ್ಯಾಂಕಾಕ್ ಮತ್ತು ಜರ್ಮನಿಯಿಂದ ಬಂದಂತಹ ಗಣ್ಯರು ತಮ್ಮ ಜೀವನದಲ್ಲಿ ಎಂದು ಕಾಣದ ಸಿನಿಮೋತ್ಸವ ಇದಾಗಿದೆ ಎಂದು ಹೊಗಳಿದರು. ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರಗಳಿಗೆ ಇಂದು ಕೊನೆಯ ಆಟ. ಬೆಂಗಳೂರಿನ ಒರಾಯನ್ ಮಾಲ್ ಮತ್ತು ಮೈಸೂರಿನ ಐನಾಕ್ಸ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದ ಚಿತ್ರ ಪ್ರದರ್ಶನಗಳು ಅಧಿಕೃತವಾಗಿ ಗುರುವಾರ ರಾತ್ರಿ 10 ಗಂಟೆಗೆ ಮುಕ್ತಾಯವಾಗಲಿದೆ ಎಂದರು.
2016ರ ಬೀಫ್ಸ್ ನಿಂದ 10 ಲಕ್ಷ ಗಳಿಕೆ
ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರೇಕ್ಷಕರು ಕೊಂಡ ಪಾಸ್ ಗಳಿಂದ ಸುಮಾರು 10 ಲಕ್ಷ ಗಳಿಕೆ ಬಂದಿದೆ. ಬೆಂಗಳೂರಿನಲ್ಲಿ ಸುಮಾರು 3000 ಪ್ರೇಕ್ಷಕರು ಚಿತ್ರಗಳನ್ನು ವೀಕ್ಷಿಸಿದ್ದಾರೆ. ಇನ್ನೂ ಮೈಸೂರಿನಲ್ಲಿ 2300 ಮಂದಿ ಚಿತ್ರಗಳನ್ನು ವೀಕ್ಷಿಸಿದ್ದಾರೆ. ಈ ಬಾರಿ ಸಿನಿಮೋತ್ಸವದಲ್ಲಿ 170 ಚಿತ್ರಗಳು ಹಾಗೂ 30 ಡಾಕ್ಯುಮೆಂಟರಿಗಳು ಪ್ರದರ್ಶನಗೊಂಡವು ಎಂದರು.
SCROLL FOR NEXT