2017

'ವಿಸಾರಣೈ' ಆಸ್ಕರ್ ಸ್ಪರ್ಧೆಯಿಂದ ಹೊರಬಿದ್ದಿರುವುದಕ್ಕೆ ಎದೆಗುಂದಿಲ್ಲ: ವೆಟ್ರಿಮಾರನ್

Guruprasad Narayana
ಬೆಂಗಳೂರು: ಆಸ್ಕರ್ ವಿದೇಶಿ ಅತ್ಯುತ್ತಮ ಸಿನೆಮಾ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ ಚಿತ್ರ 'ವಿಸಾರಣೈ' ಎರಡನೇ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದಿದ್ದು ಹಲವರಿಗೆ ನಿರಾಸೆ ತಂದಿತ್ತಾದರೂ, ವೆನಿಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದ ಈ ಸಿನೆಮಾದ ನಿರ್ದೇಶಕ ವೆಟ್ರಿಮಾರನ್, ತಾವು ಎದೆಗುಂದಿಲ್ಲ ಎಂದು ತಿಳಿಸಿದ್ದಾರೆ. ೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾತನಾಡಿದ ಅವರು "ನನ್ನನ್ನು ಮುಂದೂಡಿಕೊಳ್ಳಲು ನಾನು ಸಿನೆಮಾ ಮಾಡುವುದಿಲ್ಲ ಬದಲಾಗಿ ನನಗೆ ಯಾವುದಾದರೂ ಸಂಪೂರ್ಣವಾಗಿ ಒಪ್ಪಿತವಾದ ನಂತರವಷ್ಟೇ ನಿರ್ದೇಶನಕ್ಕೆ ಇಳಿಯುವುದು" ಎಂದಿದ್ದಾರೆ. 
'ವಿಸಾರಣೈ' ಸಿನೆಮಾ ಮಾಡಿದ ಬಗೆಯನ್ನು ವಿವರಿಸಿದ ನಿರ್ದೇಶಕ " ಈ ಸಿನೆಮಾ ನನಗೆ ಬಹಳ ಅಚ್ಚರಿ ತಂದಿತು. ನನ್ನ ಬಳಿ ಸ್ಕ್ರಿಪ್ಟ್ ಇರಲಿಲ್ಲ. ಸಿನೆಮಾದ ಮೊದಲಾರ್ಧ ಕಾದಂಬರಿ ಆಧಾರಿತ. ನನಗೆ ಸರಿ ಎಂದು ತಿಳಿದಂತೆ ಎರಡನೇ ಭಾಗವನ್ನು ಚಿತ್ರೀಕರಣ ಮಾಡಿದೆವು. ಅದು ಸ್ವಾಭಾವಿಕವಾಗಿ ಮೂಡಿ ಬಂತು" ಎಂದು ಸಿನಿರಸಿಕರ ನಡುವೆ ವೆಟ್ರಿಮಾರನ್ ಮಾತನಾಡಿದರು. 
ವೆಟ್ರಿಮಾರನ್ ಅವರ ಹಿಂದಿನ ಸಿನೆಮಾಗಳಾದ 'ಪೊಲ್ಲಧವಂ' (೨೦೦೭) ಮತ್ತು 'ಆಡುಕುಲಂ' (೨೦೧೧) ಕೂಡ ಹಲವು ಪ್ರಶಸ್ತಿ ಪಡೆದ ಚಿತ್ರಗಳು. ತಮ್ಮ ಮೊದಲ ಚಿತ್ರದೊಂದಿಗೆ 'ವಿಸಾರಣೈ' ನಿರ್ದೇಶನದ ಯೋಜನೆ ಪ್ರಾರಂಭವಾಗಿತ್ತು ಎಂದು ವಿವರಿಸುವ ನಿರ್ದೇಶಕ "'ವಿಸಾರಣೈ' ಅಂತಹ ಸಿನೆಮಾಗಳನ್ನು ಮಾಡುವುದಕ್ಕೆ ನಾನು ಮಾಡಿರುವ ಮೊದಲ ಸಿನೆಮಾಗಳನ್ನು ನಿರ್ದೇಶಿಸುವುದು ಅಗತ್ಯವಾಗಿತ್ತು" ಎನ್ನುತ್ತಾರೆ. 
ಆಟೋ ಚಾಲಕ ಎಂ ಚಂದ್ರಕುಮಾರ್ ಅವರು ತನ್ನ ಜೀವನದಲ್ಲಿ ನಡೆದ ನಿಜ ಘಟನೆಯನ್ನು ಕುರಿತು ಬರೆದಿರುವ ಕಾದಂಬರಿ 'ಲಾಕಪ್' ಆಧಾರಿತ ಈ ಸಿನೆಮಾ ಪೊಲೀಸರ ದೌರ್ಜನ್ಯ, ಪೂರ್ವಾಗ್ರಹಪೀಡಿತ ಭಾಷಾ ದುರಭಿಮಾನ, ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ-ಕ್ರೌರ್ಯ ಮುಂತಾದವುಗಳನ್ನು ತೆರೆದಿಡುತ್ತದೆ. 
ಕಾದಂಬರಿಯನ್ನು ಸಿನೆಮಾಗೆ ಅಳವಡಿಸುವುದು ಸವಾಲಿನ ಕೆಲಸ ಎಂದು ಒಪ್ಪಿಕೊಳ್ಳುವ ವೆಟ್ರಿಮಾರನ್ "ಕಾದಂಬರಿಯ ಅತ್ಯದ್ಭುತ ಅಂಶಗಳನ್ನು ತೆಗೆದುಕೊಂಡು, ಮರುಸೃಷ್ಟಿಸುವ ಅಗತ್ಯ ಇರುತ್ತದೆ" ಎಂದು ಕಿವಿಮಾತು ಹೇಳುತ್ತಾರೆ. "ಈ ಸಿನೆಮಾ ಮಾಡುವುದಕ್ಕೆ ನಾನಾಗಲಿ ನನ್ನ ತಂಡದ ತಂತ್ರಜ್ಞರಾಗಲಿ ಹಣ ಪಡೆಯಲಿಲ್ಲ" ಎಂದು ಕೂಡ ನಿರ್ದೇಶಕ ಹೇಳಿದ್ದು ವಿಶೇಷ.  
SCROLL FOR NEXT