ಮಾರ್ಕ್ವೇಜ್ ಎಂದು ಕನ್ನಡದಲ್ಲಿ ಅಪಭ್ರಂಶಗೊಂಡಿರುವ, ಗಾಬ್ರಿಯೇಲ್ ಹೋಸೆ ದ ಲಾ ಕೊನ್ಕೊರ್ಡಿಯಾ ಗಾರ್ಸಿಯಾ ಮಾರ್ಕೆಸನ ಕಥಾಲೋಕವನ್ನು ಪ್ರವೇಶಿಸುವುದು ಒಂದು ಮಟ್ಟಿಗೆ ಬಹಳ ಸರಳವೆನ್ನಿಸುಚ್ಚದೆ. ಅವನು ಆ ರೀತಿಯ ಕಥೆಗಾರ. ಆದರೆ ಅವನ ಕಥಾಲೋಕದಲ್ಲಿ ವಿಹರಿಸುವುದು ಸವಾಲಿನ ವಿಷಯವೂ ಹೌದು. ಸವಾಲಿನ ವಿಷಯವಾಗಿದ್ದರಿಂದಲೇ ಅದು ಅತ್ಯಂತ ತೃಪ್ತಿ ನೀಡುವ ವಿಷಯವೂ ಆಗಿದೆ. ಅವನು ಅಪ್ಯಾಯಮಾನದಿಂದ ಜನರನ್ನು ತನ್ನ ಕಥಾಲೋಕಕ್ಕೆ ಆಹ್ವಾನಿಸುವನೂ ಹೌದು. ಹೀಗೆ ಪ್ರವೇಶಿಸಿದ ಓದುಗರಿಗೆ ಸವಾಲನ್ನೊಡ್ಡಬಲ್ಲ ಕಥೆಗಾರನೂ ಹೌದು. ಬರೇ ಚಮತ್ಕಾರದ ಕಥೆಗಳನ್ನು ಬರೆಯುವ ಲೇಖಕ ಕಥೆಯನ್ನು ಒಮ್ಮೆ ಓದಿಸಿಕೊಳ್ಳುತ್ತಾನೆ. ಆದರೆ ಮತ್ತೆ ಮತ್ತೆ ಓದಿಸಿಕೊಳ್ಳುವ ಪ್ರತೀ ಓದಿಗೂ ಬೇರೊಂದೇ ಅರ್ಥಜಗತ್ತನ್ನು ಹೊರತೆಗೆದು ನಮ್ಮ ಮುಂದಿಡುವ, ತಾನೇ ಆಲೋಚಿಸಿರದ ಅರ್ಥ ಪ್ರಪಂಚವನ್ನು ಓದುಗನ ಅನುಭವಕ್ಕೆ ತಕ್ಕಂತೆ ಮರುಸೃಷ್ಟಿ ಮಾಡಿ ಹೊಸದೊಂದೇ ಗ್ರಹಿಕೆಗೆ ಒಡ್ಡುವ ಕಥೆಗಾರ ಸಾಮಾನ್ಯನಾಗಿರದೇ ಗಾರುಡಿಗನಾಗಿರುತ್ತಾನೆ. ಇಂಥ ಗಾರುಡಿಗನ ಕಥೆಗಳು ಎಲ್ಲ ರೀತಿಯ ಸೀಮೋಲ್ಲಂಘನವನ್ನೂ ಮಾಡುತ್ತವೆ. ಅದು ಬರಹಗಾರ ಬರೆದ ಕಾಲವನ್ನು ಮೀರಿ ಉಳಿಯುತ್ತದೆ; ಆತನ ಭಾಷೆಯನ್ನು ಮೀರುತ್ತದೆ; ಬರವಣಿಗೆಯ ಭೌಗೋಳಿಕ ಸಂದರ್ಭವನ್ನು ಮೀರುತ್ತದೆ; ಅವನ ಸಾಂಸ್ಕೃತಿಕ ಸಂದರ್ಭವನ್ನು ಮೀರುತ್ತದೆ; ಬರವಣಿಗೆಯ ಮಾಧ್ಯಮವನ್ನೂ ಮೀರುತ್ತದೆ. ಎಷ್ಟೆಂದರೆ ಅದರ ಚಿರಂತನ ಅಸ್ತಿತ್ವವಿರುವುದು ಅದು ಮತ್ತೆ ಮತ್ತೆ ಮರುಸೃಷ್ಟಿಯಾಗುವ ಪ್ರಕ್ರಿಯೆಯಲ್ಲಿ. ಅಂತಹ ಜಿರಂಜೀವಿಗಳ ಸಾಲಿಗೆ ಶತಮಾನಕ್ಕೊಂದಿಷ್ಟು ಜನ ಸಲ್ಲುತ್ತಾರೆ. ಗಾರ್ಸಿಯಾ ಮಾರ್ಕೆಸ್ ಆ ಮಟ್ಟಕ್ಕೆ ಸಲ್ಲುವ ಕಥೆಗಾರ.
ದಿವಾಕರ್-ಜಯಶ್ರೀ ಅವರ ಅನುವಾದಗಳಲ್ಲಿ ಒಂದು ಅಥೆಂಟಿಸಿಟಿಯಿದೆ. ದಿವಾಕರ್ ಲ್ಯಾಟಿನ್ ಅಮೇರಿಕನ್ ಸಾಹಿತ್ಯವನ್ನು ಸುಮ್ಮನೆ ಹಾಗೇ ಓದಿದವರಲ್ಲ. ಅದನ್ನು ಅವರು ಗಂಭೀರವಾಗಿ ಅಭ್ಯಾಸ ಮಾಡಿರುವುದಲ್ಲದೇ , ಒಂದು ಘಟ್ಟದಲ್ಲಿ ಸ್ಪಾನಿಷ್ ಭಾಷೆಯನ್ನೂ ಕಲಿಯಹೊರಟಿದ್ದರು. ದಿವಾಕರ್-ಜಯಶ್ರೀ ಒಂದು ಕೃತಿಯನ್ನು ಕೈಗೆತ್ತಿಕೊಂಡರೆ ಅದಕ್ಕೆ ಸಲ್ಲಬೇಕಾದ ಗಾಂಭೀರ್ಯತೆಯಿಂದಲೇ ಓದನ್ನೂ, ಅನುವಾದವನ್ನೂ ಮಾಡುತ್ತಾರೆ. ಹೀಗಾಗಿ ಅವರ ಅನುವಾದದಲ್ಲಿ ಮಾರ್ಕೆಸ್ ಧ್ವನಿ ಹೆಚ್ಚು ಸಹಜವಾಗಿ ನಮಗೆ ಕಾಣುತ್ತದೆ.
-ಎಂ.ಎಸ್. ಶ್ರೀರಾಮ್
ಈ ವಾರದ ಹೊತ್ತಗೆ: ಈ ಊರಿನಲ್ಲಿ ಕಳ್ಳರೇ ಇಲ್ಲ
(ಗಾಬ್ರಿಯೇಲ್ ಗಾರ್ಸಿಯಾ ಮಾರ್ ಕೆಸ್- ನಾಲ್ಕು ಕತೆಗಳು)
ಕನ್ನಡಕ್ಕೆ: ಎಸ್ ದಿವಾಕರ್
ಜಯಶ್ರೀ ಕಾಸರವಳ್ಳಿ
ಪ್ರಕಾಶಕರು: ಆಕೃತಿ ಪುಸ್ತಕ ಬೆಂಗಳೂರು
31/1, 13ನೇ ಮುಖ್ಯರಸ್ತೆ
3ನೇ ಬ್ಲಾಕ್
ರಾಜಾಜಿನಗರ
ಬೆಂಗಳೂರು 560010
ಫೋನ್: 080- 23409479, 23506788
ಬೆಲೆ: 60 ರು.