ರವೀಂದ್ರನಾಥ ಅವರ ಹೈಕುಗಳ ಒಳ ಹೊಕ್ಕಂತೆ, ಅಚ್ಚರಿಯ ದಾರದೊಳು ಮಿಂಚಿನ ಮಣಿಗಳ ಪೋಣಿಸಿ ಹಾರವನ್ನಾಗಿಸಿದ ಅನುಭವವಾಯ್ತು. ಅದನ್ನು ಪದಗಳಲ್ಲಿ ಹೇಗೆ ಹಿಡಿಯುವುದೋ ತಿಳಿಯುತ್ತಿಲ್ಲ. ಮೂರು ಪುಟ್ಟ ಸಾಲುಗಳಲ್ಲಿ ಅವರು ಕಟ್ಟಬಯಸಿದ ಭಾವ ಕನಸುಗಳ ನೂರು. ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವಲ್ಲ ಎನ್ನುವ ಕುವೆಂಪು ಆಶಯ ಈ ಪುಟ್ಟ ಕವಿತೆಗಳ ಒಡಲೊಳಗೆ ಹುಸಿರಾಡಿದಂತಿದೆ. ದೊಡ್ಡ ದೊಡ್ಡ ಸಂಗತಿಗಳ ಬೆನ್ನತ್ತುವ ಬದಲು ಸೂಕ್ಷ್ಮ ಸಂಗತಿಗಳ ಕಣ್ಣೊಳಗಿನ ಮಿಂಚನ್ನು ಗುರುತಿಸಿದಂತೆ , ಚಿಕ್ಕ ಚಿಕ್ಕ ವಸ್ತುಗಳ ಹೃದಯ ಬಡಿತವನ್ನು ಕೇಳಿಸಿದಂತಿವೆ ಇಲ್ಲಿನ ಹೈಕುಗಳು. ಕಾವ್ಯದ ಬೃಹತ್ ವ್ಯಾಖ್ಯಾನಗಳ ಹೊರುವ ಶಕ್ತಿ ಇಲ್ಲಿನ ಹೈಕುಗಳಿಗಿಲ್ಲ, ಬದಲಾಗಿ ಅಂತಹ ವ್ಯಾಖ್ಯಾನ ಹೊತ್ತು ಸಾಗುವವರ ಭಾರ ಇಳಿಸಿ ಹಗುರಾಗಿಸುವ ತ್ರಾಣ ಈ ಪುಟ್ಟ ಕವಿತೆಗಳ ಕಣ್ಣೊಳಗಿದೆ.
ಕನ್ನಡ ಕಾವ್ಯದಲ್ಲಿ ಭಿನ್ನ ಪ್ರಯೋಗಗಳು ನಡೆವ ಹೊತ್ತಿಗೆ, ರವೀಂದ್ರನಾಥ ಅವರು ಹಾಯ್ಕುವಿನ ಮೈದಡವಿದ್ದಾರೆ. ಈ ಗಂಧದ ಸುವಾಸನೆ ಕನ್ನಡ ಕಾವ್ಯಕ್ಕೆ ಹಬ್ಬಲಿ. ಪುಟ್ಟ ಕಲ್ಲಲ್ಲಿ ಅವಳ ಮೂರ್ತಿ ಕೆತ್ತಿ, ಮುಂಗುರುಳ ಹೊರಚಾಚನ್ನು ಒಡಮೂಡಿಸಿದಂತಿರುವ ಈ ಹೈಕುಗಳ ಶಿಲ್ಪಿ ರವೀಂದ್ರನಾಥ ಅವರ ಕುಸುರಿ ಕೆಲಸ ಇನ್ನಷ್ಟು ಸೂಕ್ಷ್ಮವಾಗಲಿ. ಇರುವೆ ಹೆಜ್ಜೆ ಗುರುತಿನ ಆಕಾಶದ ನಕ್ಷತ್ರಗಳ ಬೆಳಕಲ್ಲಿ ಕಾವ್ಯ ಹುಟ್ಟಲಿ.
-ಅರುಣ್ ಜೋಳದಕೂಡ್ಲಿಗಿ
ಈ ವಾರದ ಹೊತ್ತಗೆ :ಕೊಡೆಯಡಿ ಒಂದು ಚಿತ್ರ (ಹಾಯ್ಕುಗಳು)
ಲೇಖಕರು: ಡಾ.ಸಿ ರವೀಂದ್ರನಾಥ್
ಪ್ರಕಾಶಕಕರು: ಒನ್ ವ್ಹೀಲರ್ ಪ್ರಕಾಶನ
ವೆಂಕಟಾಲ
ಬೆಲೆ: ರು.90