ನವದೆಹಲಿ: ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ ಗಮನ ಹರಿಸಿರುವುದಕ್ಕೆ ಸುರೇಶ್ ಪ್ರಭು ಅವರ ರೇಲ್ವೆ ಬಜೆಟ್ ಅನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಶ್ಲಾಘಿಸಿದ್ದಾರೆ.
ಮೈತ್ರಿ ಪಕ್ಷ ಶಿವಸೇನೆಯು ಸೇರಿದಂತೆ ವಿಪಕ್ಷಗಳು ರೈಲ್ವೇ ಬಜೆಟನ್ನು ಟೀಕಿಸುತ್ತಿರುವಾಗ, ಯಾದವ್ ಅವರು ಬಜೆಟ್ ಬಗ್ಗೆ ಪ್ರಶಂಸಿಸಿರುವುದು ಬಿಜೆಪಿ ಪಕ್ಷಕ್ಕೆ ಸ್ವಲ್ಪವಾದರೂ ಹುರುಪು ಬಂದಿದೆ. "ಇದು ಒಳ್ಳೆಯ ಕೆಲಸ. ಅವರು (ಪ್ರಭು) ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ ಬದಲಾಗಿ ಹಿಂದಿನ ಯೋಜನೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ. ಇದನ್ನು ಮಾಡುವಲ್ಲಿ ಅವರು ಸಫಲವಾದರೆ, ಇದು ಅತಿ ದೊಡ್ಡ ಸಾಧನೆಯಾಗಲಿದೆ" ಎಂದು ಸಂಸತ್ತಿನ ಹೊರಗೆ ಯಾದವ್ ತಿಳಿಸಿದ್ದಾರೆ.
ಬಜೆಟ್ ಅನ್ನು ಕಾಂಗ್ರೆಸ್ ಟೀಕಿಸಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ಮುಲಾಯಂ ನಿರಾಕರಿಸಿದ್ದಾರೆ. ಉತ್ತರ ಪ್ರದೇಶಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲದಿರುವ ಬಗ್ಗೆ ಪ್ರಶ್ನಿಸಿದಾಗ, ದೇಶದ ಅತಿ ದೊಡ್ಡ ರಾಜ್ಯ ಯಾವಾಗಲೂ ಅವಗಣನೆಗೆ ಒಳಗಾಗಿದೆ ಎಂದಿದ್ದಾರೆ.