ಬೆಂಗಳೂರು: ನಿಯತ್ತಿಗೆ ಮತ್ತೊಂದು ಹೆಸರೇ 'ಶ್ವಾನ' ಎನ್ನಲಾಗುತ್ತದೆ. ತನಗೆ ಹಾನಿಯಾದರೂ ಸರಿಯೇ ತನ್ನ ಮಾಲೀಕನಿಗೆ ರಕ್ಷಣೆ ಕೊಡುವುದು ಅದರ ನಿಯತ್ತಿನ ಗುಣ. ಅದರೊಂದಿಗೆ ಕೆಲವರಿಗೆ ಅತ್ಯುತ್ತಮ ಪ್ರೀತಿ, ಒಡನಾಟ ಇರುತ್ತದೆ. ಇಂತಹ ಹೃದಯ ಸ್ಪರ್ಶಿ ನಿದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ.
ಹೌದು. ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನ ಮುದ್ದಿನ ನಾಯಿ 'ಜಾಕಿ'ಯನ್ನು ಜೊತೆಯಲ್ಲಿಟ್ಟುಕೊಂಡೇ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ತಮ್ಮ ಆಸನದ ಪಕ್ಕದಲ್ಲಿ ಮುದ್ದು ನಾಯಿಗೆ ಜಾಗ ಮಾಡಿಕೊಟ್ಟಿದ್ದು, ಅವರು ಎಲ್ಲೇ ಹೋದರೂ ಈ ನಾಯಿಯೂ ಅವರ ಜೊತೆಗೆ ಇರುತ್ತದೆ.
ಈ ಕುರಿತು ದಮಯಂತಿ ಎನ್ನುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಆಟೋ ಚಾಲಕ ಸಹೋದರನ ಜೊತೆಯಾಲ್ಲಿ ಆತನ ಮುದ್ದಿನ ನಾಯಿ ಜಾಕಿ ಪ್ರತಿ ದಿನ ಎಲ್ಲೆಡೆ ಪ್ರಯಾಣಿಸುತ್ತದೆ.
ಹುಟ್ಟಿದ ನಾಲ್ಕು ದಿನದಿಂದ ಆಟೋ ಚಾಲಕನ ಈ ಜಾಕಿಯನ್ನು ಆರೈಕೆ ಮಾಡುತ್ತಿದ್ದು, ಇದೀಗ ಜಾಕಿ ಆಟೋ ಚಾಲಕನ ಉತ್ತಮ ಒಡನಾಡಿಯಾಗಿದೆ. ಇದನ್ನು ಪೀಕ್ ಬೆಂಗಳೂರು ಮೂಮೆಂಟ್ ಎಂದು ಹೇಳಬಹುದೇ ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಈ ಹೃದಯಸ್ವರ್ಶಿ ಘಟನೆ ಮನಸ್ಸು ತಣ್ಣಗಾಗಿಸಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಪೀಕ್ ಬೆಂಗಳೂರು ಅಲ್ಲ ಪೀಕ್ ಹ್ಯೂಮಾನಿಟಿ ಎಂದು ಕೆಲವರು ವಿಶ್ಲೇಷಿಸಿದ್ದಾರೆ.