ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ ಇನ್ನೂ ರಚನೆಯಾಗಿಲ್ಲ. ಆದರೂ ಅದಕ್ಕೆ ನೀಡಲಾಗಿರುವ ಮೊತ್ತ ಮೂರು ಪಟ್ಟು ಏರಿಕೆಯಾಗಿದೆ. ಕೇಂದ್ರೀಯ
ಜಾಗೃತ ದಳಕ್ಕೆ (ಸಿವಿಸಿ) ಮುಂದಿನ ಹಣಕಾಸು ವರ್ಷಕ್ಕಾಗಿ ರು. 27.68 ಕೋಟಿ ನಿಗದಿ ಮಾಡಲಾಗಿದೆ. ಇದರ ಜತೆಗೆ ಪ್ರಸ್ತಾವಿತ ನೂತನ ಸಂಸ್ಥೆಗಾಗಿ ರು. 7 ಕೋಟಿ ನಿಗದಿ
ಮಾಡಲಾಗಿದೆ. ಸಿವಿಸಿಗೆ ನಿಗದಿ ಮಾಡಲಾಗಿರುವ ರು. 27.68 ಕೋಟಿ ಪೈಕಿ ರು. 2 ಕೋಟಿ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕಾಗಿ ವಿನಿಯೋ ಗಿಸಲಾಗುತ್ತದೆ.
ಸಿಬಿಐಗೂ ಹೆಚ್ಚು ಸಿಹಿ
ಸುಪ್ರೀಂಕೋರ್ಟಿಂದ ಪಂಜರದ ಗಿಳಿ ಎಂದೇ ಪದೇ ಪದೆ ಟೀಕೆಗೆ ಒಳಗಾಗಿರುವ ಕೇಂದ್ರ ತನಿಖಾ ಸಂಸ್ಥೆ ಸಿಬಿಐಗೆ ಬಜೆಟಲ್ಲಿ ಶೇ.10ರಷ್ಟು ಅನುದಾನ ಹೆಚ್ಚುವರಿಯಾಗಿ ಪ್ರಕಟಿಸಲಾಗಿದೆ. ಮುಂದಿನ ಹಣಕಾಸು ವರ್ಷಕ್ಕಾಗಿ ಸಂಸ್ಥೆಗೆ ರು. 565.39 ಕೋಟಿ ಸಿಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಅದಕ್ಕೆ ಮೀಸಲಾಗಿ ಇರಿಸಿದ್ದ ಮೊತ್ತ
ರು. 513.07 ಕೋಟಿ. ತನಿಖೆ, ಆಡಳಿತಾತ್ಮಕ ವೆಚ್ಚಗಳು, ತನಿಖಾ ಸಂಸ್ಥೆಯಲ್ಲಿ ಇ-ಆಡಳಿತ ಜಾರಿ, ಆಧುನೀಕರಣ,ತರಬೇತಿಗಾಗಿ ಬಳಸಲಾಗುತ್ತದೆ.
ವಿದೇಶಾಂಗಕ್ಕೂ ವಿಶೇಷ ಉಂಟು
ಕೇಂದ್ರ ಸರ್ಕಾರದ ನಾಲ್ಕು ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ವಿದೇಶಾಂಗ ಇಲಾಖೆಗೆ ಬಜೆಟಲ್ಲಿ ಭಾರಿ ಪ್ರಮಾಣದ ಹಣಕಾಸು ನೆರವು ಪ್ರಕಟಿಸಲಾಗಿದೆ. ಮುಂದಿನ ವರ್ಷಕ್ಕಾಗಿ ಇಲಾಖೆಗೆ ಶೇ.19ರಷ್ಟು ಹೆಚ್ಚುವರಿಯಾಗಿ ನೆರವು ಪ್ರಕಟಿಸಲಾಗಿದೆ. ಅಂದರೆ ರು. 12,620 ಕೋಟಿ ಸುಷ್ಮಾ ಸ್ವರಾಜ್‍ರ ಖಾತೆಗೆ ದೊರಕಿದಂತಾಗಿದೆ. ಭೂತಾನ್ ಮತ್ತು ಅಪಘಾನಿ ಸ್ತಾನಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಅವುಗಳನ್ನು ವಿನಿಯೋಗಿಸಲಾಗುತ್ತದೆ.ಇದರ ಜತೆಗೆ ಇತರ ದೇಶಗಳ ಜತೆ ಭಾರತ ಹೊಂದಿರುವತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಪ್ಪಂದಗಳ ಜಾರಿಗೆ ಬಳಸಲಾಗುತ್ತದೆ. ಶ್ರೀಲಂಕಾ ಜತೆಗಿನ ಸಹಕಾರ ಒಪ್ಪಂದ ಜಾರಿಗೆ ರು. 500 ಕೋಟಿ, ಭೂತಾನ್ ಮತ್ತು ಅಪ್ಘಾನಿಸ್ತಾನಕ್ಕಾಗಿ ರು. 6,160 ಕೋಟಿ ಮತ್ತು ರು. 676 ಕೋಟಿ ವಿನಿಯೋಗಿಸಲಾಗುತ್ತದೆ.