ಬೆಂಗಳೂರು: ಸ್ಥಳೀಯ ಚುನಾವಣೆ, ವಿಧಾನಸಭೆ ಉಪಚುನಾವಣೆಯ ಫಲಿತಾಂಶ, ವಾಚ್ ವಿವಾದ ಪ್ರಕರಣಗಳ ಪರಿಣಾಮದಿಂದ ಕುಗ್ಗಿರುವ ಸರ್ಕಾರದ ವಿಶ್ವಾಸಾರ್ಹತೆಯನ್ನು ಸರಿಪಡಿಸಲು ಸಿದ್ದರಾಮಯ್ಯ ಈ ಬಾರಿ ಎಲ್ಲಾ ವರ್ಗಗಳನ್ನು ಮೆಚ್ಚಿಸುವ ಬಜೆಟ್ ಗೆ ಸಿದ್ಧತೆ ನಡೆಸಿದ್ದಾರೆ.
ಬಜೆಟ್ ಪೂರ್ವ ಸಭೆಗಳಲ್ಲಿ ಈ ಬಗ್ಗೆ ಸುಳಿವು ನೀಡಿರುವ ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೆ ಉಪಯೋಗವಾಗುವಂತಹ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವುದು ಸ್ಪಷ್ಟವಾಗಿದೆ. 10 ತಿಂಗಳಿನಿಂದ 1 ,200 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯ ಸರ್ಕಾರ, ಸಿದ್ದರಾಯ್ಯ ಹಾಗೂ ಕಾಂಗ್ರೆಸ್ ಹೈಕಮಾಡ್ ಗೆ ಮುಜುಗರ ಉಂಟುಮಾಡಿದೆ. ಇವೆಲ್ಲದರ ನಡುವೆ ವಾಚ್ ಪ್ರಕರಣ ಹಾಗೂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಗಳಿಂದ ಪಕ್ಷದಲ್ಲೇ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಉತ್ತಮ ಬಜೆಟ್ ಮೂಲಕ ಸರಿಪಡಿಸಿಕೊಳ್ಳುವ ಅನಿವಾರ್ಯತೆಗೆ ಸಿದ್ದರಾಮಯ್ಯ ಸಿಲುಕಿದ್ದಾರೆ.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಸರ್ಕಾರ ಕಳೆದ ಮೂರು ವರ್ಶಗಳಿಂದಲೂ ಭರಪೂರ ಯೋಜನೆಗಳನ್ನು ನೀಡಿದ್ದು ಈ ಬಜೆಟ್ ನಲ್ಲಿ ನಗರ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ನಿರೀಕ್ಷೆ ಇದೆ. ಸರ್ಕಾರದ ವಿರುದ್ಧ ವಿಪಕ್ಷಗಳ ಆರೋಪ, ಆಂತರಿಕ ಭಿನ್ನಾಭಿಪ್ರಾಯ ಒಂದೆಡೆಯಾದರೆ, ಸರ್ಕಾರ ಕೈಗಾರೀಕರಣ ವಿರೋಧಿಯಲ್ಲ ಎಂಬುದನ್ನೂ ಸಹ ಸಿದ್ದರಾಮಯ್ಯ ಅವರು ಈ ಬಜೆಟ್ ನಲ್ಲಿ ಸಾಬೀತುಪಡಿಸಬೇಕಿದೆ. ಸಿದ್ದರಾಮಯ್ಯ ಅವರ ಈ ಬಾರಿಯ ಬಜೆಟ್ ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರೀಕೃತವಾಗಿರಲಿದೆ ಎಂಬ ನಿರೀಕ್ಷೆ ಇದೆ.
ಮೃತ ರೈತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವ ಭರವಸೆ ಈಡೇರಿಸದೇ ಇರುವುದಕ್ಕೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತಿವೆ, ಆದರೂ ಸಹ ಸಿದ್ದರಾಮಯ್ಯ ಈ ಬಾರಿ ರೈತರ ಸಾಲ ಮಣ್ಣ ಮಾಡುವ ಸಾಧ್ಯತೆ ಇಲ್ಲ, ಬದಲಾಗಿ ರೈತರ ಕುಟುಂಬಗಳಿಗೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯಿಂದ ಬರಬೇಕಿರುವ ಬಾಕಿ ಮೊತ್ತವನ್ನು ಪಾವತಿ ಮಾಡುವಂತೆ ಮಾಡುವುದೂ ಸಹ ಸಿದ್ದರಾಮಯ್ಯ ಅವರ ಬಜೆಟ್ ಮೇಲಿನ ನಿರೀಕ್ಷೆಗಳಲ್ಲಿ ಪ್ರಮುಖವಾದ ಅಂಶ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಪರಿಹಾರ, ಹಸಿರನ್ನು ಹೆಚ್ಚಿಸಲು ಗ್ರೀನ್ ಕರ್ನಾಟಕ ರೀತಿಯ ಯೋಜನೆಗಳನ್ನು ಘೋಷಿಸುವುದು ಹೂಡಿಕೆದಾರರನ್ನು ಸೆಳೆಯುವುದಕ್ಕೆ ಯೋಜನೆಗಳ ಘೋಷಣೆ ಸಿದ್ದರಾಮಯ್ಯ ಅವರ ಬಜೆಟ್ ನ ಉಳಿದ ನಿರೀಕ್ಷೆಗಳಾಗಿವೆ.
ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಚುನಾವಣೆ ಇಲ್ಲದಿದ್ದರೂ, ಪ್ರತಿಪಕ್ಷಗಳು, ಆಂತರಿಕ ವಿರೋಧಿಗಳ ಗುರಿಯಿಂದ ಪಾರಾಗುವುದಕ್ಕೆ ಹಾಗೂ ಹೈಕಮಾಂಡ್ ನಿಂದ ಮೆಚ್ಚುಗೆ ಪಡೆಯುವುದಕ್ಕೆ ಸಿದ್ದರಾಮಯ್ಯ ಈ ಬಾರಿ ಎಲ್ಲಾ ವರ್ಗಗಳನ್ನು ಮೆಚ್ಚಿಸುವ ಬಜೆಟ್ ಮೊರೆ ಹೊಗಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.