ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಬಳಿಕ ಬಿಡುವು ಮಾಡಿಕೊಂಡು ಬಜೆಟ್ ಸಿದ್ದಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ 11ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ 2016 ಮತ್ತು 17ನೇ ಸಾಲಿನ ಬಜೆಟ್ ಮಂಡನೆ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ, ಒಂದಷ್ಟು ಆರ್ಥಿಕ ಶಿಸ್ತು ಪಾಲಿಸುವ ದಿಶೆ ಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಇತ್ತೀಚೆಗೆ ವೈಯಕ್ತಿಕವಾಗಿ ವಾಚ್ ಪ್ರಕರಣದಿಂದ ಕಳೆಗುಂದಿರುವ ತಮ್ಮ ಇಮೇಜ್ ವೃದ್ಧಿಸಿಕೊಳ್ಳುವ ಅನಿವಾರ್ಯತೆ ಕೂಡ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಪ್ರಸಕ್ತ ಸಾಲಿನ ಬಜೆಟ್ ಜನಪರ ಬಜೆಟ್ ಆಗಿರಲಿದೆ ಎಂದು ಆಶಾಭಾವ ವ್ಯಕ್ತಪಡಿಸಲಾಗುತ್ತಿದೆ.
ಇನ್ನು ಕಳೆದ ಒಂದು ವರ್ಷದಲ್ಲಿ 1,200ಕ್ಕೂ ಹೆಚ್ಚು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಂತ್ವನ ನೀಡುವಂತಹ ಮಹತ್ವದ ನಿರ್ಧಾರಗಳು ಸಿದ್ದರಾಮಯ್ಯ ಅವರ ಬಜೆಟ್ ನಿಂದ ಹೊರಬೀಳಲಿವೆಯೇ ಎಂಬ ನಿರೀಕ್ಷೆಯೂ ಅತಿಯಾಗಿದ್ದು, ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆಯೇ ಎಂಬ ಅಂಶ ಇನ್ನೇನು ಕೆಲವೇ ಹೊತ್ತಿನಲ್ಲಿ ತಿಳಿಯಲಿದೆ.