ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2016-17ನೇ ಸಾಲಿನ ಬಜೆಟ್ ನಿರಾಶದಾಯಕವಾಗಿದ್ದು, ರಾಜ್ಯದ ಪ್ರಗತಿಗೆ ಪೂರಕವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಿಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಸಿಎಂ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಬಜೆಟ್ ನಲ್ಲಿ ಕೃಷಿಕರು ಹಾಗೂ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದರು.
ಸಿದ್ದರಾಮಯ್ಯ ಅವರು ನೀರಾವರಿಗೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಮೀಸಲಿಡುವುದಾಗಿ ಹೇಳಿದ್ದರು. ಆದರೆ ಈ ಬಾರಿ ಬಜೆಟ್ ನಲ್ಲಿ ನೀರಾವರಿಗೆ ಯಾವುದೇ ಮಹತ್ವ ನೀಡಿಲ್ಲ ಮತ್ತು ಹಣನೂ ಮೀಸಲಿಟ್ಟಿಲ್ಲ ಎಂದರು. ಅಲ್ಲದೆ ಕೃಷ್ಣಾ ಬಿ ಸ್ಕೀಂ ನೀರು ಸದ್ಬಳಕೆಗೆ ಇನ್ನೂ 30 ವರ್ಷ ಬೇಕು ಎಂದು ಹೇಳಿದರು.
ಇನ್ನು ಎತ್ತಿಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಪ್ರಾಧಿಕಾರ ರಚಿಸುವುದಾಗಿ ಸಿಎಂ ಹೇಳಿದ್ದರು. ಆದರೆ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಎತ್ತಿನಹೊಳೆ ಯೋಜನೆಯ ಹಣ ಯಾರ ಜೇಬು ತುಂಬಿದಿಯೋ ಗೊತ್ತಿಲ್ಲ. ಆದರೆ ಇದೀಗ ಬೆಂಗಳೂರಿನ ಕೊಳಚೆ ನೀರು ಹರಿಸಿ ಮತ್ತೆ ಜೇಬಿಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.