ಬೆಂಗಳೂರು: ಬಜೆಟ್ ನಲ್ಲಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದ್ದು, ಈ ಬಾರಿಯ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿಯಾಗಿ ನಾಲ್ಕನೆ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ರಾಜ್ಯ ಒಟ್ಟಾರೆ ಅಭಿವೃದ್ಧಿ ಒತ್ತು ನೀಡಲಾಗಿದೆ ಎಂದರು.
2016-17ನೇ ಸಾಲಿನ ಬಜೆಟ್ ಗಾತ್ರವನ್ನು 20,885 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಅಂದ್ರೆ ಬಜೆಟ್ ಗಾತ್ರವನ್ನು ಶೇ.14.65ರಷ್ಟ ಹೆಚ್ಚಿಸಲಾಗಿದೆ ಎಂದರು.
ಆದರೆ ಯೋಜನೇತರ ವೆಚ್ಚ ಕಡಿಮೆಯಾಗಿದ್ದು, ಯೋಜನಾ ವೆಚ್ಚ ಶೇ.1ರಷ್ಟು ಹೆಚ್ಚಳವಾಗಿದೆ. ಯೋಜನಾ ಗಾತ್ರ 85, 375 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ಸಿಎಂ ತಿಳಿಸಿದರು.
ನಾವು ಮಾಡಿರುವ ಸಾಲ 2,08,000 ಕೋಟಿ ರುಪಾಯಿ. ಸರ್ಕಾರ ಆಂತರಿಕ ಉತ್ಪನ್ನದ ಶೇ.25ರಷ್ಟು ಸಾಲ ಮಾಡಬಹುದು. ಆದರೆ ರಾಜ್ಯದ ಒಟ್ಟು ಸಾಲದ ಪ್ರಮಾಣ ಶೇ.17.22ರಷ್ಟಿದ್ದು, ಕಳೆದ ಮೂರು ವರ್ಷಗಳಿಂದ ನಾವು ವಿತ್ತೀಯ ಶಿಸ್ತು ಉಳಿಸಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ನೀರಾವರಿಗೆ ಬಜೆಟ್ ನಲ್ಲಿ ಯಾವುದೇ ಮಹತ್ವ ನೀಡಿಲ್ಲ ಎಂಬ ಪ್ರತಿಪಕ್ಷ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನೀರಾವರಿಗೂ ಸಾಕಷ್ಟು ಹಲಣವನ್ನು ಮೀಸಲಿಟ್ಟಿದ್ದೇವೆ. ನೀರಾವರಿಗೆ ಒಟ್ಟು 50 ಸಾವಿರ ಕೋಟಿ ರುಪಾಯಿ ನೀಡುತ್ತೇನೆ ಎಂದಿದ್ದೆ. ಆದರೆ ಈಗಾಗಲೇ 46 ಸಾವಿರ ಕೋಟಿ ನೀಡಿದ್ದೇನೆ. ಇನ್ನು ಮುಂದಿನ ವರ್ಷದ ಅನುದಾನ ಸೇರಿದರೆ 60 ಸಾವಿರ ಕೋಟಿ ಮೀರುತ್ತದೆ ಎಂದು ತಿರುಗೇಟು ನೀಡಿದರು.
ಇನ್ನು ಕೃಷಿಯನ್ನು ಮತ್ತು ರೈತರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂಬ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೂ ತಿರುಗೇಟು ನೀಡಿದ ಸಿಎಂ, ಈ ಬಾರಿಗೆ ಕೃಷಿಗೆ 555 ಕೋಟಿ ರುಪಾಯಿ ಹೆಚ್ಚಿನ ಅನುದಾನ ನೀಡಲಾಗಿದ್ದು, ಇದರಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅನುದಾನವೂ ಸೇರಿದೆ ಎಂದರು. ಅಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದರು.