ನವದೆಹಲಿ: 2017-18 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧಗೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಗೆ ವಿಚಿತ್ರ ಸವಾಲೊಂದು ಎದುರಾಗಿದೆ. ಜಿಎಸ್ ಟಿ ಕಾರಣದಿಂದಾಗಿ ಈ ಸವಾಲು ಎದುರಾಗಿದ್ದು, ಪರೋಕ್ಷ ತೆರಿಗೆಯ ಕುರಿತು ನಿಖರ ಅಂಕಿ-ಅಂಶಗಳಿಲ್ಲದೇ ಬಜೆಟ್ ನ್ನು ಮಂಡಿಸಬೇಕಾಗಿದೆ.
ಬಜೆಟ್ ಮಂಡನೆಯಲ್ಲಿ ಯೋಜನೆಗಳ ಘೋಷಣೆಗಾಗಿ ವಿತ್ತ ಸಚಿವಾಲಯ ಸಾಮಾನ್ಯವಾಗಿ ನೇರ ಹಾಗೂ ಪರೋಕ್ಷ ತೆರಿಗೆಯ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಬಜೆಟ್ ನ್ನು ಸಿದ್ಧಪಡಿಸುತ್ತದೆ. ಆದರೆ ಈ ಬಾರಿ ಜಿಎಸ್ ಟಿ ಜಾರಿಯ ವಿಳಂಬದಿಂದಾಗಿ ವಿತ್ತ ಸಚಿವಾಲಯದ ಬಳಿ ಪರೋಕ್ಷ ತೆರಿಗೆ ಕುರಿತು ನಿಖರ ಅಂಕಿ-ಅಂಶಗಳಿಲ್ಲದಂತಾಗಿದೆ.
ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸೇರಿದಂತೆ ನೇರ ತೆರಿಗೆ ವ್ಯಾಪ್ತಿಯಲ್ಲಿ ಬರುವ ತೆರಿಗೆಗಳ ಬಗ್ಗೆ ಅಂಕಿ-ಅಂಶಗಳಿವೆ. ಆದರೆ ಜಿಎಸ್ ಟಿ ಜಾರಿ ಜು.1 ಕ್ಕೆ ಮುಂದೂಡಲಾಗಿದ್ದು, ಜಿಎಸ್ ಟಿ ಜಾರಿ ವಿಳಂಬದಿಂದಾಗಿ ಸೀಮಾ ಸುಂಕ, ಸೇವಾ ತೆರಿಗೆ ಸೇರಿದಂತೆ ಪರೋಕ್ಷ ತೆರಿಗೆಯ ಅಂಕಿ-ಅಂಶಗಳು ಈ ವರೆಗೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪರೋಕ್ಷ ತೆರಿಗೆಯ ಅಂಕಿ-ಅಂಶಗಳೇ ಇಲ್ಲದೇ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
2017-18 ನೇ ಸಾಲಿನ ಬಜೆಟ್ ನಲ್ಲಿ ತೆರಿಗೆ ಕಡಿತಗೊಳಿಸುವ ನಿರೀಕ್ಷೆ ಇದೆಯಾದರೂ ಪರೋಕ್ಷ ತೆರಿಗೆ ಅಂಕಿ-ಅಂಶಗಳು ಲಭ್ಯವಿಲ್ಲದ ಕಾರಣ ತೆರಿಗೆ ಕಡಿತ ಸಹ ಕಷ್ಟ ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.