ನವದೆಹಲಿ: ಮಾಜಿ ಸಚಿವ ಹಾಗೂ ಕೇರಳ ಸಂಸದ ಇ ಅಹಮದ್ ಅವರ ಸಾವಿನ ಹೊರತಾಗಿಯೂ ಬಜೆಟ್ ಮಂಡನೆ ನಿಗದಿಯಂತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಇ ಅಹಮದ್ ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನ ಮುಂದೂಡಿಕೆಯಾಗುವ ಕುರಿತು ಸುದ್ದಿಗಳು ಹರಿದಾಡುತ್ತಿದ್ದು, ಅಲ್ಲದೆ ಸ್ವತಃ ಪ್ರಮುಖ ವಿಪಕ್ಷ ಕಾಂಗ್ರೆಸ್ ಸೇರಿದಂತೆ ಶಿವಸೇನೆ, ಜೆಡಿಯು ಹಾಗೂ ಕೇರಳ ಸಂಸದರು ಬಜೆಟ್ ಮಂಡನೆಯನ್ನು ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. ವಿಪಕ್ಷಗಳ ಒತ್ತಾಯದ ನಡುವೆಯೂ ಇದೀಗ ಕೇಂದ್ರ ಸರ್ಕಾರ ನಿಗದಿಯಂತೆ ಬಜೆಟ್ ಮಂಡನೆ ಮಾಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸ್ವತಃ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಟ್ವೀಟ್ ಮಾಡಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ತಾವು 2017ನೇ ಸಾಲಿನ ಬಜೆಟ್ ಮಂಡಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಂತೆಯೇ ನಿನ್ನೆ ರಾತ್ರಿ ನಿಧನರಾದ ಕೇರಳ ಸಂಸದ ಇ ಅಹ್ಮದ್ ಅವರ ಸಾವಿಗೆ ಜೇಟ್ಲಿ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಬಜೆಟ್ ಮಂಡನೆ ಕುರಿತಂತೆ ಪ್ರಧಾನ ಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿ, ನಿಗದಿಯಂತೆ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿತ್ತು.
ನೋಟು ನಿಷೇಧ ಬಳಿಕದ ಆರ್ಥಿಕ ಬೆಳವಣಿಗೆ ಹಾಗೂ ಕೇಂದ್ರ ಸರ್ಕಾರದ ನಗದು ರಹಿತ ವಹಿವಾಟು ಗುರಿ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ತೀವ್ರ ಕುತೂಹಲ ಕೆರಳಿಸಿದ್ದು, ಯಾವೆಲ್ಲಾ ವಲಯಗಳಿಗೆ ಬಜೆಟ್ ಎಷ್ಟರ ಮಟ್ಟಿಗೆ ಉತ್ತೇಜನ ನೀಡಲಿದೆ ಎಂಬುದು ತಿಳಿಯಲಿದೆ. ಅಂತೆಯೇ ರೈಲ್ವೇ ಬಜೆಟ್ ಅನ್ನೂ ಕೂಡ ಕೇಂದ್ರ ಬಜೆಟ್ ನಲ್ಲೇ ವಿಲೀನ ಮಾಡಿರುವುದರಿಂದ ರೈಲ್ವೇ ಬಜೆಟ್ ಕೂಡ ಇಂದೇ ಮಂಡನೆಯಾಗಲಿದೆ.