ನವದೆಹಲಿ: 2017-18ನೇ ಸಾಲಿನ ಪ್ರಸಕ್ತ ವರ್ಷದ ಕೇಂದ್ರ ಬಜೆಟ್ ಮಂಡನೆ ಮುಕ್ತಾಯಗೊಂಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಕೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಇದಾಗಿತ್ತು. ಈ ಬಾರಿಯ ಬಜೆಟ್'ನ ಒಟ್ಟು ಗಾತ್ರವು ರೂ. 21 ಲಕ್ಷದ 47 ಸಾವಿರ ಕೋಟಿಯಾಗಿದ್ದು, ಪ್ರಸಕ್ತ ವರ್ಷ ಸೇರಿ ಜೇಟ್ಲಿ ಅವರು ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. 1 ಗಂಟೆ 50 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿ ಹೇಳಿದರು.
ಈ ಬಾರಿಯ ಬಜೆಟ್ ನಲ್ಲಿ ರಾಜಕೀಯ ಪಕ್ಷಗಳಿಗೆ ದೊಡ್ಡ ಶಾಕ್ ನೀಡಿದ ಜೇಟ್ಲಿಯವರು ತೆರಿಗೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಪ್ರಾಮಾಣಿಕ ತೆರಿಗೆದಾರರನ್ನು ಕೇಂದ್ರ ಸರ್ಕಾರ ಗೌರವದಿಂದ ನಡೆಸಿಕೊಳ್ಳಲಿದೆ ಎಂದು ಹೇಳುವ ಮೂಲಕ ವಿತ್ತ ಸಚಿವರು ತಮ್ಮ ಬಜೆಟ್ ಮಂಡನೆಯನ್ನು ಮುಕ್ತಾಯಗೊಳಿಸಿದರು.
ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 2016-17ನೇ ಸಾಲಿನ ಬಜೆಟ್ ಮಂಡಿಸಿದ ಬೆನ್ನಲ್ಲೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.
ಮಂಗಳವಾರ ತಡರಾತ್ರಿ ಕೇಂದ್ರದ ಮಾಜಿ ಸಚಿವ ಇ. ಅಹಮದ್ ಅವರು ವಿಧಿವಶರಾಗಿದ್ದರು. ಈ ಹಿನ್ನಲೆಯಲ್ಲಿ ಬಜೆಟ್ ಮುಂದೂಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಿರಿಯ ಸಚಿವರೊಂದಿಗೆ ಸಭೆಯನ್ನು ನಡೆಸಿ ಬಜೆಟ್ ಮಂಡಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಮಾಜಿ ಸಚಿವರ ನಿಧನರಾದ ಹಿನ್ನಲೆಯಲ್ಲಿ ಬಜೆಟ್ ನ್ನು ಮುಂದುಡುವಂತೆ ಆಗ್ರಹಿಸಿದ್ದವು. ಬೆಳಿಗ್ಗೆ ಬಜೆಟ್ ಕಲಾಪ ಆರಂಭವಾಗುತ್ತಿದ್ದಂತೆ ಒಂದು ನಿಮಿಷದ ಮೌನಾಚರಣೆ ಮೂಲಕ ಸಂಸತ್ ನಲ್ಲಿ ಅಹ್ಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು. ನಂತರ ಸುಮಿತ್ರಾ ಮಹಾಜನ್ ಮಾತನಾಡಲು ಆರಂಭ ಮಾಡುತ್ತಿದ್ದಂತೆ ಕಲಾಪವನ್ನು ಮುಂದೂಡುವಂತೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಆಗ್ರಹಿಸಿದರು. ಈ ಎಲ್ಲಾ ಬೆಳವಣಿಗೆ ಹಾಗೂ ಒತ್ತಾಯಗಳ ನಡುವೆಯೂ ನಡುವೆಯೂ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆ ಮಾಡಿದರು.