ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದು, ಕನ್ನಡ ಚಿತ್ರ ರಂಗಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಜೇನುಗೂಡು’ ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರುಪಾಯಿ ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರುಪಾಯಿಗಳ ವಿಶೇಷ ಸಹಾಯಧನ. ಪ್ರತಿ ವರ್ಷ 8 ಚಲನಚಿತ್ರಗಳಿಗೆ ಹಣಕಾಸಿನ ನೆರವು ನೀಡುವುದಾಗಿ ಸಿಎಂ ಹೇಳಿದ್ದಾರೆ.
ಡಾ ರಾಜ್ ಕುಮಾರ್ ಸ್ಮಾರಕದ ಬಳಿ ಯೋಗ ಕೇಂದ್ರ ನಿರ್ಮಾಣ ಮಾಡುವುದಾಗಿ ಹಾಗೂ ಚಲನಚಿತ್ರ ಕಾರ್ಮಿಕರು ಮತ್ತು ತಂತ್ರಜ್ಞರ ಆರೋಗ್ಯ ಸೌಲಭ್ಯ ಒದಗಿಸಲು ಚಲನಚಿತ್ರ ಕಾರ್ಮಿಕರ ದತ್ತಿನಿಧಿ' ಸ್ಥಾಪಿಸಿ ಅದಕ್ಕೆ 10 ಕೋಟಿ ರಪಪಾಯಿ ಅನುದಾನ ಒದಗಿಸಿದೆ.
2018-2019ನೇ ಸಾಲಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಟ್ಟಾರೆಯಾಗಿ 239 ಕೋಟಿ ರುಗಳನ್ನು ಒದಗಿಸಲಾಗುವುದು. ಮೊಟ್ಟಮೊದಲ ಬಾರಿಗೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಮತ್ತು ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ ಪರಂಪರೆ ಬಿಂಬಿಸುವ 'ಕಲಬುರಗಿ ಕಲಾವನ' ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.