ಬೆಂಗಳೂರು: 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಗೆ ರೂ.6,528 ಕೋಟಿ ಮೀಸಲಿಟ್ಟಿದ್ದಾರೆ.
ಪ್ರಸಕ್ತ ಸಾಲಿನ ಆಯವ್ಯಯವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು, ಅಂತರ್ಜಾತಿ ವಿವಾಹವಾಗುವ ಎಸ್'ಸಿ ಯುವಕರಿಗೆ ರೂ.3 ಲಕ್ಷ, ಯುವತರಿಯರಿಗೆ ರೂ.5 ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ,
ವಿಕಾಸ ಸೌಧದ ಸಮೀಪ ರೂ. 25 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಪೂರ್ತಿ ಭವನ, ಸಮಾಜ ಕಲ್ಯಾಣ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಾಣ, ನಗರ ಪ್ರದೇಶಗಳಲ್ಲಿ ಹೊಸದಾಗಿ 250 ಅಂಗನವಾಡಿ ಕೇಂದ್ರಗಳ ಪ್ರಾರಂಭ. ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆಗೆ 100 ಸಂಚಾರಿ ಅಂಗವಾಡಿ ಕೇಂದ್ರ ಸ್ಥಾಪನೆ.
ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನ ರೂ.200 ಹಾಗೂ ಶೈ.75ಕ್ಕಿಂತ ಕಡಿಮೆ ಅಂಗವೈಕಲ್ಯತೆ ಹೊಂದಿರುವವರಿಗೆ ಮಾಸಾಶನ ರೂ.100 ಹೆಚ್ಚಳ. ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ಅನುಸಾರ, ಎ ಮತ್ತು ಬಿ ಸಮೂಹದ ಹುದ್ದೆಗಳಲ್ಲಿ ಶೇ.4 ರಷ್ಟು ಮೀಸಲಾತಿ.
ಹಿಂದುಳಿದ ವರ್ಗಗಳು ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿಗೆ ಕೆನೆಪದರ ಆದಾಯ ಮಿತಿ ರೂ.6 ಲಕ್ಷದಿಂದ ರೂ.8 ಲಕ್ಷಕ್ಕೆ ಹೆಚ್ಚಳ. ಹಿಂದೂಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಾಂಗಕ್ಕೆ ವಿದೇಶ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವ ಗುರಿ. 2018-19ನೇ ಸಾಲಿನಲ್ಲಿ 150 ವಿದ್ಯಾರ್ಥಿಗಳ ಆಯ್ಕೆ. ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ ರೂ.10 ಲಕ್ಷಗಳವರೆಗೆ ಸಾಲ. ವಾರ್ಷಿಕ ಶೇ.6 ರಷ್ಟು ಬಡ್ಡಿದರ.
ರಾಜ್ಯ ವಕ್ಫ್ ಪರಿಷತ್ ಕಾರ್ಪಸ್ ಫಂಡ್'ಗೆ ರೂ.20 ಕೋಟಿ ಅನುದಾನ. ಮದರಸಾಗಳ ಆಧುನೀಕರಣ, ಮೂಲಸೌಕರ್ಯಕ್ಕೆ ರೂ.15 ಕೋಟಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರಿಗೆ ಸಾಲ.
ರೂ.15 ಕೋಟಿ ವೆಚ್ಚದಲ್ಲಿ ಸ್ಟಾರ್ಟ್ ಅಪ್ ಸಾಲ ಯೋಜನೆ ಜಾರಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ. ಹುಣಸೂರು, ಹೆಚ್.ಡಿ.ಕೋಟೆಯಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಆದಿವಾಸಿ ಭವನ ನಿರ್ಮಾಣ, ಸೋಲಿಗ, ಜೇನುಕುರುಬ, ಕಾಡು ಕುರುಬು, ಇರುಳಿಗ, ಕೊರಗ, ಎರವ, ಹಸಲರು, ಹಕ್ಕಿಪಿಕ್ಕಿ ಇತ್ಯಾದಿ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ರೂ.300 ಕೋಟಿ ಅನುದಾನ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 267 ಕೋಟಿ ರೂ., ಸವಿತಾ ಸಮಾಜ, ತಿಗಳ, ಮಡಿವಾಳ, ಕುಂಬಾರರ ಜನಾಂಗದ ಆರ್ಥಿಕ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ. ದೇವದಾಸಿಯರ ಸಬಲೀಕರಣಕ್ಕೆ ಸಾಲ ಮತ್ತು ಸಹಾಯಧನ. ದೇವದಾಸಿ ಹೆಣ್ಣು ಮಕ್ಕಳಿಗೆ 5 ಲಕ್ಷ ರೂಪಾಯಿ ಹಾಗೂ ದೇವದಾಸಿ ಗಂಡು ಮಕ್ಕಳಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹ ಧನ.
ಹಾಸ್ಟೆಲ್ ಗಳಲ್ಲಿ ಆಹಾರ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದ್ದು, ವಿದ್ಯಾರ್ಥಿಗಳ ತಿಂಗಳ ಊಟದ ವೆಚ್ಚ ದ್ವಿಗುಣಗೊಳಿಸಲಾಗಿದೆ. ಎಸ್'ಸಿ, ಎಸ್.ಟಿ ಗುತ್ತಿಗೆದಾರರ ಮಿತಿ ರೂ.50 ಲಕ್ಷದಿಂದ ರೂ.1 ಕೋಟಿ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.