ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಪ್ರವಾಸೋದ್ಯಮಕ್ಕೆ ನಿರೀಕ್ಷೆಯ ಮಟ್ಟದಲ್ಲಿ ಬಜೆಟ್ ನಲ್ಲಿ ಒತ್ತು ನೀಡಲಾಗಿಲ್ಲ.
ಸರ್ಕಾರವು ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡಲು ಮುಂದೆ ಬರುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಿದೆ. ಎರಡು ವರ್ಷದ ಡಿಪ್ಲೆಮೋ ತರಬೇತಿ ನೀಡಲು ಈ ಮೂರು ಸ್ಥಳಗಳಲ್ಲಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂಪಾಯಿಗಳನ್ನು ಷೇರು ಬಂಡಾವಾಳದ ರೂಪದಲ್ಲಿ ನೀಡಲಿದೆ.
ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ಆರಂಭಿಸಲು ಉದ್ದೇಶಿಸಿದೆ. ಈ ಮೇಲೆ ಹೇಳಿದ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡುವ ಸಲುವಾಗಿ ಅಗತ್ಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿಗಳನ್ನು ನಿಗಧಿಪಡಿಸಲಾಗಿದೆ.
500 ಕೊಠಡಿಗಳ ಸೌಲಭ್ಯವಿರುವ `3 ಸ್ಟಾರ್ ಹೋಟೆಲ್’ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂಪಾಯಿಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅಪಾರ್ಟ್‍ಮೆಂಟ್ ಗಳನ್ನು ಕಟ್ಟಲು ಮುಂದೆ ಬಂದಲ್ಲಿ ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು ಟರ್ಮ್ ಶೀಟ್ ಆಧಾರದ ಮೇಲೆ ನೀಡಲಾಗುವುದು.
ಕೆ.ಎಸ್.ಟಿ.ಡಿ.ಸಿ. ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂಪಾಯಿ ನೀಡಲು ಆಯೋಜಿಸಿದೆ. ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ತಿಂಡಿ ಮಾಡಿಕೊಂಡು ಪ್ರಯಾಣ ಮುಂದುವರೆಸಲು ಅನುಕೂಲವಾಗುವ ರೀತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿದೆ.
ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವ ವಿದ್ಯಾನಿಲಯ ತೆರೆಯಲು 3 ಕೋಟಿ ರು, ಅನುದಾನ ಘೋಷಿಸಲಾಗಿದೆ.