ನವದೆಹಲಿ: ಕೇಂದ್ರ ಬಜೆಟ್ 2018ರ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೇಂದ್ರ ವಿತ್ತ ಸಚಿವ ಹೊಸದೊಂದು ದಾಖಲೆಗೆ ಸಾಕ್ಷಿಯಾಗಲಿದ್ದು, ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಅನ್ನು ಹಿಂದಿ ಭಾಷೆಯಲ್ಲಿ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಬಾರಿಯ ಆಯವ್ಯಯ ಮಂಡನೆಯಲ್ಲಿ ಹಲವು ಸಂಪ್ರದಾಯಗಳನ್ನು ಮುರಿಯುತ್ತಿದ್ದು, ಇಷ್ಟು ದಿನ ಚಾಲ್ತಿಯಲ್ಲಿದ್ದ ಇಂಗ್ಲೀಷ್ ಭಾಷೆಯಲ್ಲಿನ ಬಜೆಟ್ ಮಂಡನೆಯನ್ನು ಬದಿಗೊತ್ತಿ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತಿದೆ.
ಸ್ವಾತಂತ್ರ್ಯ ನಂತರದಲ್ಲಿ ಇಲ್ಲಿಯವರೆಗೂ 37 ಮಂದಿ ಬಜೆಟ್ ಮಂಡಿಸಿದ್ದು ಇಲ್ಲಿಯವರೆಗೂ ಎಲ್ಲ ಹಣಕಾಸು ಸಚಿವರು ಆಂಗ್ಲ ಭಾಷೆಯಲ್ಲಿ ಆಯವ್ಯಯ ಮಂಡಿಸುತ್ತಿದ್ದರು. 2014ರಲ್ಲಿ ಅಸ್ತಿತ್ವಕ್ಕೆ ಬಂದ ಎನ್‌ಡಿಎ ಸರ್ಕಾರದ ವಿತ್ತ ಸಚಿವ ಅರುಣ್ ಜೇಟ್ಲಿ ಇದೇ ಮೊದಲ ಬಾರಿಗೆ ಸಂಪ್ರದಾಯ ಬದಿಗೊತ್ತಿ ಹಿಂದಿಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಬಜೆಟ್ ಮಂಡಿಸಿದ್ದ ಜೇಟ್ಲಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಹಿಂದಿಯಲ್ಲಿ ಮಂಡನೆ ಮಾಡಲಿದ್ದಾರೆ.
ಸಾಮಾನ್ಯರಿಗೆ ಅರ್ಥವಾಗುವ ಭಾಷೆ ಹಿಂದಿಯಾದ ಕಾರಣ ಹಿಂದಿಯಲ್ಲಿ ಭಾಷಣ ಮಂಡಿಸಿಲಿದ್ದಾರಂತೆ. ಆದರೆ ದಕ್ಷಿಣ ಭಾರತದ ಮಂದಿಗೆ ಹಿಂದಿ ಇಂದಿಗೂ ಕಬ್ಬಿಣದ ಕಡಲೆ. ಇದರ ಜೊತೆ ಫೆಬ್ರವರಿ 1ರಂದು ಮಂಡನೆಯಾಗುತ್ತಿರುವುದು ಕೂಡ ನೂತನ ಸಂಪ್ರದಾಯ. ಹಲವು ವರ್ಷಗಳಿಂದ ಫೆಬ್ರವರಿ ಕೊನೆಯ ವಾರದಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುತ್ತಿತ್ತು.