ಕರ್ನಾಟಕ ಬಜೆಟ್

ಕರ್ನಾಟಕ ಬಜೆಟ್ 2019: ಮಠ, ಮಂದಿರಗಳಿಗೆ ಭರಪೂರ ಕೊಡುಗೆ

Shilpa D
ಬೆಂಗಳೂರು: ಕರ್ನಾಟಕದ ಸಂಸ್ಕೃತಿ, ಪರಂಪರೆ ರಕ್ಷಣೆಗಾಗಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಠ, ಮಂದಿರಗಳು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಒಟ್ಟು 88 ಕೋಟಿ ರೂ.  ಕೊಡುಗೆ ನೀಡಿದೆ. ಇತ್ತೀಚಿಗೆ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ನಾಥ ಪರಂಪರೆಯ ಬಾಲಗಂಗಾಧರ ನಾಥ ಸ್ವಾಮೀಜಿಯವರ ಸಂಸ್ಮರಣಾರ್ಥ ಯೋಜನೆಗಳಿಗೆ ವಿಶೇಷ ಅನುದಾನ ಪ್ರಕಟಿಸಿದೆ.
 
ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಹೆಸರಾಗಿರುವ ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳವಾದ ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆ, ವಿಚಾರಧಾರೆಯನ್ನು ವಿಶ್ವದೆಲ್ಲೆಡೆ ಪಸರಿಸಲು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ 2019-20ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 25 ಕೋಟಿ ರೂ.ಗಳ ವಿಶೇಷ ಅನುದಾನ ಪ್ರಕಟಿಸಿದ್ದಾರೆ.
 
ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಿನಲ್ಲಿ ಸಾಂಸ್ಕೃತಿ ಹಾಗೂ ಪಾರಂಪರಿಕ ಕೇಂದ್ರ:
ಭಾರತದ ತತ್ವಜ್ಞಾನ ಪರಂಪರೆಯಲ್ಲಿ ವೈಚಾರಿಕ ಪಂಥವೆನಿಸಿರುವ ನಾಥ ಪಂಥದ ಪರಂಪರೆ ಹಾಗೂ ವೈಚಾರಿಕ ನಿಲುವುಗಳನ್ನು ಪ್ರಚುರ ಪಡಿಸಿದವರಲ್ಲಿ ಆದಿಚುಂಚನಗಿರಿ ಸಂಸ್ಥಾನದ ಬಾಲಗಂಗಾಧರ ನಾಥ ಸ್ವಾಮೀಜಿ ಅಗ್ರಗಣ್ಯರು.  

ಶ್ರೀಗಳ ಜನ್ಮಸ್ಥಳವಾದ ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕಿನ ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಸ್ವಾಮಿ ವಿವೇಕಾನಂದರು ಪಶ್ಚಿಮ ಬಂಗಾಳದ ಬೇಲೂರು ಮಠದ ಮಾದರಿಯಲ್ಲಿ ಸಾಂಸ್ಕೃತಿ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಶ್ರೀಗಳ ಜೀವನ ಸಾಧನೆಗಳು ಮತ್ತು ವಿಚಾರಗಳನ್ನು ಸಾರುವ ಸಾಂಸ್ಕೃತಿ ಹಾಗೂ ಪಾರಂಪರಿಕ ಕೇಂದ್ರದ ನಿರ್ಮಾಣಕ್ಕಾಗಿ 25 ಕೋಟಿ ರೂ. ಗಳ ವಿಶೇಷ ಅನುದಾನ ಪ್ರಕಟಿಸಿದ್ದಾರೆ.

ಮುಸ್ಲಿಂ ಖಬ್ರಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ಮೀಸಲಿರಿಸಿರುವ ಸಿಎಂ ಕುಮಾರಸ್ವಾಮಿ, ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ರೂ ಅನುದಾನ ನೀಡಿದ್ದಾರೆ.

ಮಾನಸ ಸರೋವರ ಯಾತ್ರಿಗಳ ಸಹಾಯ ಧನ 30 ಸಾವಿರ ರೂ.ಗಳಿಗೆ ಏರಿಕೆ ಮಾಡಿರುವ ಸಿಎಂ ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ ಅನುದಾನ ನೀಡಿದ್ದಾರೆ, ಹಾಗೆಯೇ ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ ನೀಡಿದ್ದಾರೆ.

ಕನಕಗುರು, ಕಾಗಿನೆಲೆ ಪೀಠಕ್ಕೆ 1 ಕೋಟಿ ರು. ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಮಠಗಳಿಗೆ ತಲಾ 1 ಕೋಟಿ ರು ಅನುದಾನ ನೀಡಿದ್ದಾರೆ.
SCROLL FOR NEXT