ಕರ್ನಾಟಕ ಬಜೆಟ್

ಕರ್ನಾಟಕ ಬಜೆಟ್ 2019: ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. ಮೀಸಲು ನಿಗದಿ

Raghavendra Adiga
ಬೆಂಗಳೂರು: ಕನ್ನಡ ಸಂಸ್ಕೃತಿ, ಪರಂಪರೆಯ ಸಂರಕ್ಷಣೆಯ ಸಲುವಾಗಿ, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುವಾಗುವಂತೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 5 ಕೋಟಿ ರೂ., ಮೀಸಲಿಡಲಾಗಿದೆ.
ಅಂತೆಯೇ ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ., ಜಗದ್ಗುರು ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಠದ ವತಿಯಿಂದ ಮೈಸೂರಿನಲ್ಲಿ ಕರಕುಶಲಕರ್ಮಿಗಳಿಗೆ ‘ಅರ್ಬನ್ ಹಾತ್’ ವ್ಯವಸ್ಥಿತ ಸೌಲಭ್ಯ ಹಾಗೂ ಉನ್ನತೀಕರಣಕ್ಕೆ 5 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
“ಜಾನಪದ ಜಾತ್ರೆ”ಗೆ ಮರುಜೀವ
ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ “ಜಾನಪದ ಜಾತ್ರೆ” ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ಸರ್ಕಾರ ಉದ್ದೇಶಿಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಹಾಸ್ಯ ಚಕ್ರವರ್ತಿ, ದಿವಂಗತ ನಟ ನರಸಿಂಹರಾಜು ಅವರ ಹೆಸರಿನಲ್ಲಿ ತಿಪಟೂರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಿಸಲು 2019-20ನೇ ಸಾಲಿನ ಬಜೆಟ್ ನಲ್ಲಿ 2 ಕೋಟಿ ರೂ. ಪ್ರಕಟಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಗೆ 1 ಕೋಟಿ, ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಚಟುವಟಿಕೆಗಳ ಕಾರ್ಯನಿರ್ವಹಣೆಗೆ 1 ಕೋಟಿ ರೂ., ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ 1 ಕೋಟಿ ರೂ., ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ಆದಿಶಕ್ತಿ ಮಾತೆಯರ ವೃದ್ಧಾಶ್ರಮ ಅಭಿವೃದ್ಧಿಗೆ 2 ಕೋಟಿ ರೂ. ಕರಗ ಉತ್ಸವ ಆಚರಿಸುವ 139 ಸಂಘ, ಸಂಸ್ಥೆಗಳಿಗೆ 2 ಕೋಟಿ ರೂ. ನಿಗದಿಪಡಿಸಲಾಗಿದೆ.
SCROLL FOR NEXT