ಕೇಂದ್ರ ಬಜೆಟ್

ಬಜೆಟ್ 2019: ದಿನವೊಂದಕ್ಕೆ 17 ರೂ. ಕೊಡುವ ಮೂಲಕ ರೈತರಿಗೆ ಅವಮಾನ- ರಾಹುಲ್ ಗಾಂಧಿ

Nagaraja AB

ನವದೆಹಲಿ: ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಇಂದು ಮಂಡಿಸಿರುವ 2019-20 ನೇ ಸಾಲಿನ ಮಧ್ಯಂತರ ಕೇಂದ್ರ ಬಜೆಟ್ ನಲ್ಲಿ ರೈತರಿಗೆ ದಿನವೊಂದಕ್ಕೆ 17 ರೂ. ನೀಡುವುದಾಗಿ ಘೋಷಣೆ ಮಾಡುವ ಮೂಲಕ ಅವರ ಶ್ರಮ, ಬದ್ಧತೆ ಎಲ್ಲವನ್ನೂ ಅವಮಾನ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರೈತರಿಗೆ ಪ್ರತಿವರ್ಷ 6 ಸಾವಿರ ರೂ. ನೇರ ನಗದು ವರ್ಗಾವಣೆ ಘೋಷಣೆ ಕುರಿತಂತೆ ಟ್ವೀಟರ್ ಮೂಲಕ ಟೀಕಿಸಿರುವ ರಾಹುಲ್ ಗಾಂಧಿ, ಕಳೆದ ಐದು ವರ್ಷಗಳಿಂದ ರೈತರ ಜೀವನವನ್ನು ಸರ್ಕಾರ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೇರ ನಗದು ವರ್ಗಾವಣೆ ಮೂಲಕ ಪ್ರತಿವರ್ಷ ರೈತರ ಖಾತೆಗಳಿಗೆ 6 ಸಾವಿರ ರೂ. ನೀಡುವುದಾಗಿ ಪಿಯೂಷ್ ಗೋಯೆಲ್ ಘೋಷಿಸಿದ್ದು,  ಈ ಯೋಜನೆ ಪ್ರಕಾರ ಕೇಂದ್ರ ಸರ್ಕಾರ ಮೂರು ಕಂತಿನಲ್ಲಿ  ಪ್ರತಿ ದಿನ 16.44 ರೂ. ಹಣವನ್ನು ನೀಡಲಿದೆ.

ಆಖ್ರಿ ಜುಮ್ಲಾ ಬಜೆಟ್'. ಎಂಬ ಹ್ಯಾಷ್ ಟಾಗ್ ಬಳಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಡಿಯರ್ ನಮೋ, ಐದು ವರ್ಷಗಳ ನಿಮ್ಮ ಆಕ್ರಮಣಕಾರಿ ಹಾಗೂ ಅಸಮರ್ಥ ಆಡಳಿತ  ರೈತರ ಜೀವನವನ್ನು ಹಾಳು ಮಾಡಿದೆ. ಪ್ರತಿದಿನ 17 ರೂ. ನೀಡುವ ಮೂಲಕ ಅವರ ಕೆಲಸ, ಬದ್ಧತೆ  ಎಲ್ಲವನ್ನೂ ಕೂಡಾ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
SCROLL FOR NEXT