ಕೋಲ್ಕತ್ತಾ: ಶುಕ್ರವಾರ ಕೇಂದ್ರದ ಎನ್ ಡಿಎ ಸರ್ಕಾರ ಮಂಡಿಸಿದ ಮದ್ಯಂತರ ಬಜೆಟ್ ಗೆ ಯಾವ ಮಹತ್ವವಿಲ್ಲ. ಕೇಂದ್ರ ಸರ್ಕಾರದ ಅವಧಿ ಶೀಘ್ರವೇ ಮುಗಿಯಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ..
"ಇದನ್ನು(ಮಧ್ಯಂತರ ಬಜೆಟ್) ಯಾರು ಕಾರ್ಯಗತಗೊಳಿಸಲಿದ್ದಾರೆ? ಈ ಬಜೆಟ್ ಅನ್ನು ಕಾರ್ಯರೂಪಕ್ಕೆ ತರಲು ಹೊಸ ಸರಕಾರ ಬರುತ್ತದೆಯೇ? ಚುನಾವಣೆ ಹೊಸ್ತಿಲಲ್ಲಿರುವಾಗ ಈ ಬಜೆಟ್ ಗೆ ಯಾವ ಮೌಲ್ಯವಿಲ್ಲ. ಇದು ಕೇವಲ ಚುನಾವಣೆ ಬಜೆಟ್ "ಮಮತಾ ಹೇಳಿದ್ದಾರೆ.
"ಈ ಸರ್ಕಾರಕ್ಕೆ ನೈತಿಕ ಅಧಿಕಾರ ಅಥವಾ ಜವಾಬ್ದಾರಿ ಇಲ್ಲ. 5 ವರ್ಷ ಬಜೆಟ್ ಮಂಡಿಸುವಾಗಿಲ್ಲದ ಕಾಳಜಿ ಇದೀಗ ತೋರಿದರೆ ಏನು ಪ್ರಯೋಜನ?ಅವಧಿ ಮುಗಿಯುವವರೆಗೆ ಸರ್ಕಾರ ಇರಲಿದೆ.ನೀವು ಅವಧಿ ಮುಗಿದ ನಂತರ ಔಷಧಿಯನ್ನು ಕೊಟ್ಟರೆ, ಯಾವುದೇ ಉಪಯೋಗವಿದೆಯೆ? ಒಮ್ಮೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದ ಬಳಿಕ ಈ ಬಜೆಟ್ ನ ಯಾವ ಯೋಜನೆಗಳ ಅನುಷ್ಠಾನ ಸಾಧ್ಯವಾಗದು. ಹಾಗಾಗಿ ಈ ಮದ್ಯಂತರ ಬಜೆಟ್ ಗೆ ಯಾವುದೇ ಮಹತ್ವವಿಲ್ಲ" ಅವರು ಹೇಳಿದರು.
"ಅಂತಹ (ಬಜೆಟ್) ಘೋಷಣೆ ಮಾಡಲು ಬಿಜೆಪಿ ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ರೈತರಿಗಾಗಿ ಒಂದೇ ಒಂದು ಉತ್ತಮ ಯೋಜನೆಯನ್ನೂ ಏಕೆ ಘೋಷಣೆ ಮಾಡಿಲ್ಲ?" ಪ್ರಸಕ್ತ ಬಜೆಟ್ ನಲ್ಲಿನ ಬಡ ರೈತರ ಪರ ಯೋಜನೆಯನ್ನು ಉಲ್ಲೇಖಿಸಿ ಮಮತಾ ಮಾತನಾಡಿದ್ದಾರೆ.ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿ ಬಳಿಕ ದೇಶವು ತುರ್ತು ಪರಿಸ್ಥಿತಿಯಂತಹಾ ಕಾಲಘಟ್ಟವನ್ನು ಹಾದು ಹೋಗುತ್ತಿದೆ ಎಂದು ಪ. ಬಂಗಾಳ ಮುಖ್ಯಮಂತ್ರಿ ಆರೋಪಿಸಿದ್ದಾರೆ