ಕೇಂದ್ರ ಬಜೆಟ್

ಕೇಂದ್ರ ಬಜೆಟ್: ಶಿಕ್ಷಣ ಅನುದಾನ ಶೇ. 10ರಷ್ಟು ಏರಿಕೆ, ನ್ಯಾಷನಲ್ ಎಜುಕೇಷನ್ ಮಿಷನ್ ಗೆ 38 ಸಾವಿರ ಕೋಟಿ ಅನುದಾನ

Srinivasamurthy VN
ನವದೆಹಲಿ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಶುಕ್ರವಾರ ಮಂಡಿಸಿದ 2019ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಲಾಗಿರುವ ಅನುದಾನದಲ್ಲಿ ಶೇ.10ರಷ್ಟು ಹೆಚ್ಚಳಗಿದೆ.
ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿಯೇ ಒಟ್ಟು 93,847.64 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಇದರಲ್ಲಿ 37,461.01 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣಕ್ಕೆ, 56,386.63 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಇನ್ನು ಕಳೆದ ವರ್ಷದ ಬಜೆಟ್ ಹೋಲಿಕೆ ಮಾಡಿದರ ಈ ಬಾರಿ ಶಿಕ್ಷಣ ಕ್ಷೇತ್ರದ ಅನುದಾನದಲ್ಲಿ ಶೇ.10 ಏರಿಕೆಯಾಗಿದೆ. ಕಳೆದ ವರ್ಷ ಶಿಕ್ಷಣ ಕ್ಷೇತ್ರದ ಒಟ್ಟು ಅನುದಾನ 85,010 ಕೋಟಿ ರೂ. ಆಗಿತ್ತು. 
ಉತ್ತನ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಸಂಶೋಧನೆಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರ 'ಶಿಕ್ಷಣ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಪುನಶ್ಚೇತನ-(ರೈಸ್‌)' ಯೋಜನೆ ರೂಪಿಸಿದ್ದು, 2022ರ ವೇಳೆಗೆ ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲು ನಿರ್ಧರಿಸಿದೆ. ಇದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಿದೆ. ಹೊಸ ಸಂಶೋಧನೆಗಳ ಮೇಲಿನ ಅನುದಾನವನ್ನು 350.23 ಕೋಟಿ ರೂ.ಗಳಿಂದ 608.87 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ಕೂಲ್ಸ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್‌
ಇನ್ನು ದೇಶದ ಯೋಜನೆ ಮತ್ತು ವಿನ್ಯಾಸ ವಲಯದ ಸವಾಲು ನಿಭಾಯಿಸುವುದಕ್ಕಾಗಿಯೇ 'ಸ್ಕೂಲ್ಸ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್‌ (ಸ್ಪಾ)' ಸಂಸ್ಥೆಗಳನ್ನು ಆರಂಭಿಸುವ ಕುರಿತು ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.  ಐಐಟಿ ಮತ್ತು ಎನ್ಐಟಿಗಳು ಸೇರಿದಂತೆ ಇತರೆ 18 ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪಾ ಆರಂಭಿಸಲು ನಿರ್ಧರಿಸಲಾಗಿದೆ. ಇವುಗಳ ಆರಂಭಕ್ಕೆ ಈಗಾಗಲೇ ಪ್ರಕ್ರಿಯೆ ಶುರುವಾಗಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಐಐಟಿ/ಎನ್‌ಐಟಿಯ ನಿರ್ದೇಶಕರು ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. 'ಆಪರೇಷನ್‌ ಡಿಜಿಟಲ್‌ ಬೋರ್ಡ್‌ ' ಕಾರ್ಯಕ್ರಮದ ರೂಪುರೇಷೆಗಳನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. 
ತಾಂತ್ರಿಕ ಶಿಕ್ಷಣಕ್ಕೆ 'ದೀಕ್ಷಾ'
ಇನ್ನು ಸರ್ಕಾರ ಇತ್ತೀಚೆಗೆ ಆರಂಭಿಸಿರುವ ದೀಕ್ಷಾ ಡಿಜಿಟಲ್ ಪೋರ್ಟಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಪೂರಕವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೇ ದೀಕ್ಷಾ ಯೋಜನೆಯನ್ನು ವಿಸ್ತರಿಸುವ ಕುರಿತೂ ಬಜೆಟ್ ನಲ್ಲಿ ಪ್ರಸ್ತಾವನೆ ಮಾಡಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ಸಮಿತಿ ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಪರೇಷನ್ ಡಿಜಿಟಲ್ ಬೋರ್ಡ್ ಹೆಸರಿನಲ್ಲಿ ಎಲ್ಲ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. 
SCROLL FOR NEXT