ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ ತಮ್ಮ ಮೊದಲ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದು, ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.
ಬಜೆಟ್ ನಲ್ಲಿ ಸೆಸ್ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.5 ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ 2.3 ರೂ. ಏರಿಕೆಯಾಗಲಿದ್ದು, ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ.
ನಿರ್ಮಲಾ ಸೀತಾರಾಮನ್ ಅವರು 2019-2020ನೇ ಸಾಲಿನ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು, ಇದರಿಂದ 28 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ.
ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 70.51 ರೂ. ಡೀಸೆಲ್ ಬೆಲೆ 64.33 ರೂ. ಹಾಗೂ ಮುಂಬೈನಲ್ಲಿ ಪೆಟ್ರೋಲ್ ಬೆಲೆ 76.15, ಡೀಸೆಲ್ ಬೆಲೆ 67.40 ರೂ. ಇದೆ.