ರಾಜ್ಯ ಬಜೆಟ್

ಸರ್ಕಾರಿ ನೌಕರರಿಗೆ ನಗದು ರಹಿತಾ ಶಸ್ತ್ರಚಿಕಿತ್ಸಾ ಸೌಲಭ್ಯ, ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು

Srinivas Rao BV

ಬೆಂಗಳೂರು: ರಾಜ್ಯ ಸರ್ಕಾರದ ಜ್ಯೋತಿ ಸಂಜೀವಿನಿ ಯೋಜನಗೆ ಮಾರ್ಪಾಡು ತಂದು, ಅಂದಾಜು ವಾರ್ಷಿಕ ವೆಚ್ಚ 50 ಕೋಟಿ ರೂ. ವೆಚ್ಚದಲ್ಲಿ ಶಸ್ತ್ರ ಚಿಕಿತ್ಸಾ ವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಜಾರಿಗೆ ತರಲಾಗುವುದು. ಇದರಿಂದ  ರಾಜ್ಯದ 22.5 ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ. 

ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ವಲಯಕ್ಕೆ  10,194 ಕೋಟಿ ರೂ. ಮೀಸಲಿರಿಸುವುದಾಗಿ ಪ್ರಕಟಿಸಿದ ಅವರು, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ “ಜನ ಸೇವಕ” ಯೋಜನೆ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದರು. 

ಬೆಂಗಳೂರು -ಒನ್ ಮಾದರಿಯಲ್ಲಿ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲಿ ಗ್ರಾಮ-1 ಕೇಂದ್ರಗಳ ಸ್ಥಾಪಿಸಲಾಗುವುದು.  “ಮಾಹಿತಿ ಕಣಜ” ತಂತ್ರಾಂಶ ಅಭಿವೃದ್ಧಿಪಡಿಸುವ ಮೂಲಕ ರಾಜ್ಯದ ನಾಗರಿಕರು ಜಾಲತಾಣದ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಅನುಕೂಲ ಕಲ್ಪಿಸಲಾಗುವುದು.  ಮುಂದಿನ ದಿನಗಳಲ್ಲಿ ಸಕಾಲ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮವಾಗಿ  ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲು  ನಿರ್ಧರಿಸಲಾಗಿದೆ ಎಂದು ಅವರು ಘೋಷಿಸಿದರು.

ರಾಜ್ಯ ಸರ್ಕಾರದ ಕೆಲವು ಕಚೇರಿಗಳನ್ನು ಹಂತ ಹಂತವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಜನಸ್ನೇಹಿ ಸಹಾಯ ವೇದಿಕೆ” ಯೋಜನೆಯನ್ನು ಬಲ ಪಡಿಸಲು ಐದು ಕೋಟಿ ರೂ. ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. 
ಡಿಜಿಟಲ್ ಮಾಧ್ಯಮ ಜಾಹೀರಾತು ನೀತಿ ಜಾರಿಗೆ ಕ್ರಮ. ಇದಕ್ಕಾಗಿ ಹಿರಿಯ ಪತ್ರಕರ್ತರೂ ಆಗಿದ್ದ ಖ್ಯಾತ ಸಾಹಿತಿ ಡಾ|| ಡಿ.ವಿ. ಗುಂಡಪ್ಪ ಅವರ ಹೆಸರಿನಲ್ಲಿ ನಿಧಿ ಸ್ಥಾಪಿಸಲಾಗುವುದು. “ಪೊಲೀಸ್ ಗೃಹ-2020” ಯೋಜನೆಯ ಕಾಮಗಾರಿ ಮುಂದುವರೆಸಲು 200 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು. 

ಬೆಂಗಳೂರು ಮಹಿಳೆಯರ ಸುರಕ್ಷತೆಗಾಗಿ ಅಭಿವೃದ್ಧಿ ಪಡಿಸಿರುವ ‘ಸುರಕ್ಷಾ ಆ್ಯಪ್’ ರಾಜ್ಯಾದ್ಯಂತ ವಿಸ್ತರಿಸಿ, ತುರ್ತು ಸ್ಪಂದನಾ ವಾಹನಗಳ ಮೂಲಕ ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕಾಪಾಡಲು ಪಿಂಕ್ ಹೊಯ್ಸಳ ಸೇರಿದಂತೆ 75 ಹೊಯ್ಸಳ ವಾಹನ ಹಾಗೂ ಇನ್ನಿತರೆ ಜಿಲ್ಲೆಗಳಿಗೆ ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ ಬಳಸಲು 75 ವಾಹನ  ಖರೀದಿಸಲಾಗುವುದು ಎಂದರು. 

ಜೊತೆಗೆ, ವೈಟ್‍ಫೀಲ್ಡ್ ನಲ್ಲಿ ಹೊಸದಾಗಿ ಸಂಚಾರ ಉಪ ವಿಭಾಗ ಸ್ಥಾಪನೆ, ಪೊಲೀಸ್ ಶ್ವಾನದಳದ ಬಲವರ್ಧನೆಗೆ 2.5 ಕೋಟಿ ರೂ. ಅನುದಾನ ಮೀಸಲು, ಕೆ-ಸೇಫ್ ಅಡಿಯಲ್ಲಿ 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಕ್ರಮ, ಕಾರವಾರ ಬಂದರಿನಲ್ಲಿ ಸುಮಾರು 19 ಕೋಟಿ ರೂ.ಗಳ ಅಂದಾಜಿನಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. 

ಪೊಲೀಸ್ ತರಬೇತಿ ಶಾಲೆಗಳಲ್ಲಿ ಹಾಗೂ ಸಿ.ಎ.ಆರ್., ಡಿ.ಎ.ಆರ್. ಕೇಂದ್ರ ಸ್ಥಾನಗಳಲ್ಲಿ ರಿಯಾಯಿತಿ ದರದಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ ನೀಡಲಾಗುವುದು. ರಾಜ್ಯದ ರಸ್ತೆ ಸಾರಿಗೆ ನಿಗಮಗಳ ವತಿಯಿಂದ 2450 ಹೊಸ ಬಸ್‍ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು. 

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2000 ರೂ. ನೆರವು ನೀಡಲು 40 ಕೋಟಿ ರೂ. ಅನುದಾನ ಮೀಸಲಿರಿಸಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.

SCROLL FOR NEXT