ರಾಜ್ಯ ಬಜೆಟ್

ಬಜೆಟ್ ಮಂಡನೆ ಮುನ್ನ ಸಿಎಂ ಯಡಿಯೂರಪ್ಪ ಅವರ ಅಂತಿಮ ತಯಾರಿ ಹೇಗಿತ್ತು?: ಅವರ ತಂಡ ಮಾಡಿದ ಕೆಲಸವೇನು?

Sumana Upadhyaya

ಬೆಂಗಳೂರು: ಒಂದು ವರ್ಷದ ಆಯವ್ಯಯ ಮಂಡಿಸುವುದು ಎಂದರೆ ಅದು ಸಾಮಾನ್ಯ ವಿಷಯವೇನಲ್ಲ. ಸಾಕಷ್ಟು ಪೂರ್ವ ತಯಾರಿ ಇರಬೇಕಾಗುತ್ತದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅದರ ಕೊನೆಯ ಹಂತದ ಸಿದ್ದತೆಯಾಗಿ ನಿನ್ನೆ ಸಂಜೆ ತಮ್ಮ ಬಜೆಟ್ ತಂಡದವರ ಜೊತೆ ತಮ್ಮ ನಿವಾಸದಲ್ಲಿ ಅಂತಿಮ ರೂಪುರೇಷೆ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡುವಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಪಾತ್ರ ಬಹಳ ಮಹತ್ತರವಾಗಿದೆ.

ಬಜೆಟ್ ಸಿದ್ಧಪಡಿಸುವಲ್ಲಿ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳು ಕಳೆದ ಒಂದು ತಿಂಗಳಿಂದ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡಿದ್ದಾರೆ. ಇದು ಅಷ್ಟೇ ಗುರುತರ ಮತ್ತು ಹೊಣೆಗಾರಿಕೆಯ ಕೆಲಸವಾಗಿದೆ.


ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಬಜೆಟ್ ಕಾರ್ಯದರ್ಶಿ ಏಕರೂಪ್ ಕೌರ್, ವೆಚ್ಚ ನಿರ್ವಹಣಾ ಕಾರ್ಯದರ್ಶಿ ಜಾಫರ್ ಮತ್ತು ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಚಂದ್ರಶೇಖರ್ ಅಧಿಕಾರಿಗಳ ತಂಡ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಬಜೆಟ್ ಸಿದ್ಧತೆಗಾಗಿ ಶ್ರಮಿಸಿದ್ದಾರೆ. ಅದರಲ್ಲೂ ಕಳೆದ ಒಂದು ವಾರದಿಂದ ಈ ನಾಲ್ವರು ಅಧಿಕಾರಿಗಳು ಯಾರ ಕೈಗೂ ಸಿಗದೇ ಮನೆಗೂ ಹೋಗದೇ ಹಗಲೂ ರಾತ್ರಿ ಕಚೇರಿಯಲ್ಲೇ ಬಿಡಾರ ಹೂಡಿ ಬಜೆಟ್ ತಯಾರಿ ಹಾಗೂ ಗೌಪ್ಯತೆ ಕಾಪಾಡುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೆರವಾಗಿದ್ದಾರೆ.

ಬಜೆಟ್ ನ ದಾಖಲೆಗಳನ್ನು ತಂಡದ ಮುಂದೆ ಓದಿ ಕೆಲವು ಸಂದೇಹಗಳನ್ನು ಪರಿಹರಿಸಿಕೊಂಡರು. ಇಂದು ವಿಧಾನಸೌಧದಲ್ಲಿ ಅವರು ಎರಡು ಗಂಟೆಗೂ ಹೆಚ್ಚು ಕಾಲ ನಿಂತು ಬಜೆಟ್ ದಾಖಲೆಗಳನ್ನು ಓದಬೇಕಾಗುತ್ತದೆ. ಇದಕ್ಕಾಗಿ ನಿನ್ನೆ ತಮ್ಮ ನಿವಾಸದಲ್ಲಿ ಬಜೆಟ್ ದಾಖಲೆಗಳನ್ನು ಓದಿದ ಬಳಿಕ ಹಣಕಾಸು ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಆಗಿರುವ ಐಎಸ್ಎನ್ ಪ್ರಸಾದ್ ಮತ್ತು ಅವರ ತಂಡದ ಮುಂದೆ ಓದಿದರು. ಕೆಲವು ತಿದ್ದುಪಡಿ ಮಾಡಿದರು. ನಂತರ ತಂಡ ತೀವ್ರ ಭದ್ರತೆಯೊಂದಿಗೆ ಸರ್ಕಾರದ ಮುದ್ರಣಾಲಯಕ್ಕೆ ಮುದ್ರಣಕ್ಕೆ ದಾಖಲೆಗಳನ್ನು ತೆಗೆದುಕೊಂಡು ಹೋಯಿತು. ಅಲ್ಲಿ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಬಜೆಟ್ ದಾಖಲೆಗಳು ಮುದ್ರಣವಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಎಷ್ಟು ಪ್ರತಿಗಳು ಮುದ್ರಣವಾಗಬೇಕೆಂದು ಸಹ ಅವರು ನೋಡಿಕೊಳ್ಳುತ್ತಾರೆ. ಮುದ್ರಣವಾದ ನಂತರ ವಿಧಾನಸೌಧಕ್ಕೆ ತೆಗೆದುಕೊಂಡು ಬಂದು ಇಂದು ಸದನದಲ್ಲಿ ಮುಖ್ಯಮಂತ್ರಿಗಳು ಓದಲು ಆರಂಭಿಸಿದ ನಂತರ ಸದನ ಸದಸ್ಯರಿಗೆ ಹಂಚಲಾಗುತ್ತದೆ.


ಕಳೆದ ತಿಂಗಳಿನಿಂದಲೇ ಬಜೆಟ್ ಸಂಬಂಧ ಮುಖ್ಯಮಂತ್ರಿಗಳು ಸಭೆ, ಸಮಾಲೋಚನೆ ನಡೆಸುತ್ತಿದ್ದರು. ಅದರಲ್ಲಿ ಐಎನ್ಎಸ್ ಪ್ರಸಾದ್, ಎಕ್ರೂಪ್ ಕೌರ್ ಮತ್ತು ಹಣಕಾಸು ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸುತ್ತಿದ್ದರು. ಯಡಿಯೂರಪ್ಪನವರಿಗೆ ಸಲಹೆಗಾರರಾಗಿರುವ ನಿವೃತ್ತ ಅಧಿಕಾರಿ ಲಕ್ಷ್ಮೀನಾರಾಯಣ ನಿನ್ನೆಯ ಸಭೆಯಲ್ಲಿ ಹಾಜರಿದ್ದರು. ಶಿವಮೊಗ್ಗದಲ್ಲಿ ಅವರು ಸೇವೆಯಲ್ಲಿರುವಾಗ ಯಡಿಯೂರಪ್ಪನವರಿಗೆ ಹತ್ತಿರವಾಗಿದ್ದರು.

ಇನ್ನು ಐಎನ್ಎಸ್ ಪ್ರಸಾದ್ ಅವರಿಗೆ ಇದು ಸತತ ಮೂರನೇ ಬಜೆಟ್ ತಯಾರಿ ಅನುಭವ. ಆದರೆ ಅದು ಬೇರೆ ಬೇರೆ ಸರ್ಕಾರಗಳಡಿಯಲ್ಲಿ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಕೂಡ ಅವರು ಬಜೆಟ್ ತಯಾರಿಯ ಉಸ್ತುವಾರಿ ವಹಿಸಿದ್ದರು.


ಈ ಬಾರಿಯ ಬಜೆಟ್ ನಲ್ಲಿ ಯಡಿಯೂರಪ್ಪನವರು ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಯೇ ಯಡಿಯೂರಪ್ಪನವರಿಗೆ ರಾಜಕೀಯವಾಗಿ ಮುಖ್ಯ ಬೆಂಬಲ ಸಿಗುತ್ತಿರುವುದು. ರೈತ ಸಮುದಾಯದಲ್ಲಿ ಈ ಬಾರಿ ನಿರೀಕ್ಷೆ ಅಪಾರವಾಗಿದೆ. 

ಬಜೆಟ್ ಸಮಯದಲ್ಲಿ ಯಡಿಯೂರಪ್ಪ ಪಾಲಿಸುತ್ತಾರೆ ತಮ್ಮದೇ ಸಂಪ್ರದಾಯ: ರಾಜ್ಯ ಬಜೆಟ್ ಮಂಡನೆ ಪೂರ್ವದಲ್ಲಿ ನಿರ್ದಿಷ್ಟ ಸಂಪ್ರದಾಯವೆಂಬುದೇನಿಲ್ಲ. ಕೇಂದ್ರ ಬಜೆಟ್ ಮಂಡನೆಗೆ ಮುನ್ನವಾದರೆ ಹಲ್ವಾ ತಯಾರಿಸಲಾಗುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ತಮ್ಮ ಸದಾಶಿವನಗರ ಬಳಿಯ ಧವಳ ನಿವಾಸದ ಸಮೀಪ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರಲಿದ್ದಾರೆ. ಇದಕ್ಕೂ ಮುನ್ನ 6 ಬಾರಿ ಬಜೆಟ್ ಮಂಡಿಸುವಾಗಲೂ ಯಡಿಯೂರಪ್ಪ ಇದೇ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ದೇವಸ್ಥಾನದಿಂದ ನೇರವಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಮಗಳು ರಕ್ಷಿತಾ ವಿವಾಹ ಸಮಾರಂಭಕ್ಕೆ ಅರಮನೆ ಮೈದಾನಕ್ಕೆ ತೆರಳುವ ಸಾಧ್ಯತೆಯಿದೆ. ಅಲ್ಲಿಂದ ವಿಧಾನ ಸೌಧಕ್ಕೆ ಬಂದು ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಸಿ ಅದರಲ್ಲಿ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆದು 11 ಗಂಟೆಗೆ ಬಜೆಟ್ ಮಂಡಿಸುತ್ತಾರೆ. 

ಬಜೆಟ್ ಮುದ್ರಣ ಮಾಡುವ ಸರ್ಕಾರಿ ಮುದ್ರಣಾಲಯದ ಸಿಬ್ಬಂದಿ ಕಳೆದ ಒಂದು ವಾರದಿಂದ ಯಾರ ಸಂಪರ್ಕಕ್ಕೂ ಸಿಗದೆ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಅಧಿಕೃತವಾಗಿ ಬಜೆಟ್ ಮಂಡನೆಯಾದ ನಂತರ ಈ ಎಲ್ಲಾ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ.

SCROLL FOR NEXT