ಕೇಂದ್ರ ಬಜೆಟ್

ಪಾಕ್, ಚೀನಾ ಗಡಿ ಕಾಯುವ ಭದ್ರತಾ ಪಡೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ

Lingaraj Badiger

ನವದೆಹಲಿ: ಭಾರತದ ಪಶ್ಚಿಮ ಮತ್ತು ಉತ್ತರದ ನೆರೆಹೊರೆಯವರೊಂದಿಗೆ ನಿರಂತರ ಉದ್ವಿಗ್ನತೆಯ ನಡುವೆಯೂ ಭಾರತ-ಪಾಕಿಸ್ತಾನ, ಚೀನಾ-ಭಾರತ ಮತ್ತು ಇತರ ಗಡಿಗಳನ್ನು ಕಾಪಾಡುವ ಕೇಂದ್ರ ಭದ್ರತಾ ಪಡೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ 2021-22ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಐಟಿಬಿಪಿಗೆ ಒಟ್ಟು 1,03,802.52 ಕೋಟಿ ರೂ. ನೀಡಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ 7.1 ರಷ್ಟು ಹೆಚ್ಚಾಗಿದೆ.

ಇನ್ನೂ ರಕ್ಷಣಾ ವಲಯಕ್ಕೆ 4.78 ಲಕ್ಷ ಕೋಟಿ ರೂಪಾಯಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒದಗಿಸಿದ್ದಾರೆ.

ಆತ್ಮನಿರ್ಭರ ಭಾರತ ಯೋಜನೆಯಲ್ಲಿ ದೇಶೀಯವಾಗಿ ನಿರ್ಮಿತವಾಗುವ ಯುದ್ಧ ಸಲಕರಣೆಗಳನ್ನು ಖರೀದಿಗೆ 4,78,19,562 ಕೋಟಿ ರೂ. ನಿಗದಿಪಡಿಸಲಾಗಿದೆ.

2021-22ರ ರಕ್ಷಣಾ ಬಜೆಟ್ ಅನ್ನು 4.78 ಲಕ್ಷ ಕೋಟಿಗಳಿಗೆ ಹೆಚ್ಚಳ ಮಾಡಿದ್ದಾಗಿ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಹೇಳಿದ್ದಾರೆ.

"ಜನರು ಈ ರೀತಿಯ ಬಜೆಟ್ ಅನ್ನು ನಿರೀಕ್ಷಿಸಿರಲಿಲ್ಲ, ಏಕೆಂದರೆ ಒಂದು ರೀತಿಯಲ್ಲಿ ಸರ್ಕಾರವು ಈ ಮೊದಲು ಐದು ಮಿನಿ ಬಜೆಟ್ ಗಳನ್ನು ಮಂಡಿಸಿ ಅದರ ಮೂಲಕ ಹಲವು ಪ್ಯಾಕೇಜ್ ಘೋಷಿಸಲಾಗಿತ್ತು. ಇದು ಉತ್ತಮ ಬಜೆಟ್ ಎಂದೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

SCROLL FOR NEXT