ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2022: ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಹಣಕಾಸು ನೆರವು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಾಯ

Sumana Upadhyaya

ಬೆಂಗಳೂರು: 2021-22ನೇ ಹಣಕಾಸು ವರ್ಷದಲ್ಲಿ ಮೂಲಸೌಕರ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ನೀಡುವ ಯೋಜನೆಗೆ ವೆಚ್ಚವನ್ನು 10 ಸಾವಿರ ಕೋಟಿ ರೂಪಾಯಿಗಳಿಂದ 1 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್-2022ನ್ನು ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲು ಇದರಿಂದ ಸಹಾಯವಾಗಲಿದ್ದು, ಅದರಲ್ಲೂ ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಬಂದರುಗಳ ಯೋಜನೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತಂದಿರುವ ಘಟಿ ಶಕ್ತಿ ಯೋಜನೆಗಳಿಗೆ ಈ ಹಣಕಾಸು ನೆರವಿನಿಂದ ಸಹಾಯವಾಗಲಿದೆ ಎಂದರು. 

ಕರ್ನಾಟಕ ರಾಜ್ಯ ಕಳೆದ ಹಣಕಾಸು ವರ್ಷದಲ್ಲಿ 380 ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪಡೆದಿದ್ದು ಪ್ರಸಕ್ತ ಹಣಕಾಸು ಸಾಲಿನಲ್ಲಿ 3 ಸಾವಿರ ಕೋಟಿ ರೂಪಾಯಿ ಪಡೆಯುವ ನಿರೀಕ್ಷೆಯಿದೆ.

2022-23ಕ್ಕೆ, ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ಹೆಚ್ಚಿಸಲು ರಾಜ್ಯಗಳಿಗೆ ಸಹಾಯ ಮಾಡಲು 1 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಈ 50 ವರ್ಷಗಳ ಬಡ್ಡಿ ರಹಿತ ಸಾಲಗಳು ರಾಜ್ಯಗಳಿಗೆ ನೀಡುತ್ತಿರುವ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿವೆ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.

ರಾಜ್ಯಗಳು ಸಾಲಗಳನ್ನು ಪಡೆಯಲು ಅರ್ಹವಾಗಿರುವಾಗ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಮೇರೆಗೆ ಯಾವುದೇ ಕೆಲಸಗಳಿಗೆ ಹಣ ಖರ್ಚು ಮಾಡಲು ಸ್ವಾತಂತ್ರ್ಯವಿರುತ್ತದೆ. ಕರ್ನಾಟಕದ ಬಿಜೆಪಿ ಸರ್ಕಾರ ಆದ್ಯತೆ ಮೇರೆಗೆ ಹೆದ್ದಾರಿಗಳ ಅಭಿವೃದ್ಧಿ,  ಮೆಟ್ರೊ ರೈಲುಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ನೀರಾವರಿ ಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ.

ರಾಜ್ಯಗಳಿಗೆ ಬಂಡವಾಳದ ವೆಚ್ಚವನ್ನು ಹೆಚ್ಚಿಸಿರುವುದರಿಂದ, ನಮ್ಮ ಬಂಡವಾಳದ ವೆಚ್ಚದಲ್ಲಿ ಹೆಚ್ಚುವರಿ 3 ಸಾವಿರ ಕೋಟಿ ರೂಪಾಯಿಗಳನ್ನು ನಾವು ನಿರೀಕ್ಷಿಸುತ್ತೇವೆ. ರಸ್ತೆ ಮಾರ್ಗಗಳು ಮತ್ತು ರೈಲ್ವೆ ಯೋಜನೆಗಳಲ್ಲಿ ನಮ್ಮ ಪಾಲನ್ನು ನಾವು ಹೊಂದಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಘಟಿ ಶಕ್ತಿ ಯೋಜನೆಗಳ ಮೂಲಕ ತಮ್ಮ ಬಜೆಟ್ ವೆಚ್ಚವನ್ನು ಹೆಚ್ಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ರಾಜ್ಯವು ಕಳೆದ ಹಣಕಾಸು ವರ್ಷದಲ್ಲಿ 380 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ ವರ್ಧಿತ ಸಾಲವನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಹಿಂದಿನ ವರ್ಷಕ್ಕೆ ಅನುಗುಣವಾಗಿ ಪಡೆಯಲು ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ.

SCROLL FOR NEXT