ರಾಜ್ಯ ಬಜೆಟ್

ರಾಜ್ಯ ಬಜೆಟ್ 2023: ಹಸಿರೀಕರಣಕ್ಕೆ 500 ಕೋಟಿ ರೂ.; ಮಾನವ-ಕಾಡಾನೆ ಸಂಘರ್ಷ ತಡೆಯಲು 120 ಕೋಟಿ ರೂ. ಮೀಸಲು

Vishwanath S

ಬೆಂಗಳೂರು: ರಾಜ್ಯದಲ್ಲಿ ಮಾನವ–ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಒಂದು 520 ಕಿ.ಮೀ.ಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ 312 ಕಿ.ಮೀ. ನಷ್ಟು ಬ್ಯಾರಿಕೇಡ್‌ ನಿರ್ಮಿಸಲಾಗಿದ್ದು, ಬಾಕಿ ಉಳಿದಿರುವ ಬ್ಯಾರಿಕೇಡ್‌ ನಿರ್ಮಾಣ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಈ ಕಾಮಗಾರಿಗಳ ಅನುಷ್ಠಾನಕ್ಕೆ 2023-24 ರಲ್ಲಿ 120 ಕೋಟಿ ರೂ. ಮೀಸಲಿಡಲಾಗಿದೆ. 

ಮಾನವ - ಕಾಡಾನೆ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಎರಡು ಹೊಸ ಆನೆ ಕಾರ್ಯಪಡೆಗಳನ್ನು ರಚಿಸಲಾಗುತ್ತದೆ. 

ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಸಂರಕ್ಷಿಸಿದ, ಗಾಯಗೊಂಡ, ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ರಕ್ಷಣೆ/ನಿರ್ವಹಣೆ ಮಾಡುತ್ತಿರುವ ಬನ್ನೇರುಘಟ್ಟ ಮತ್ತು ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಗಳ ಸಾಮರ್ಥ್ಯ ವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಹೊಸದಾಗಿ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು. ಬೀದರ್‌ ಜಿಲ್ಲೆಯಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಂಡು ಬರುವುದರಿಂದ, ಇವುಗಳ ಸಂರಕ್ಷಣೆಗಾಗಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನು ಘೋಷಿಸಲಾಗುವುದು. ಈ ಸಂರಕ್ಷಣಾ ಮೀಸಲು ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗಾಗಿ ಎರಡು ಕೋಟಿ ರೂ. ಮೀಸಲಿಡಲಾಗಿದೆ.

ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭೌಗೋಳಿಕ ವಿಸ್ತೀರ್ಣದ ಶೇ.33 ರಷ್ಟು ಭಾಗ ಅರಣ್ಯ ಪ್ರದೇಶದಿಂದ ಆವೃತಗೊಂಡಿರಬೇಕಾಗಿದ್ದು, ಕರ್ನಾಟಕ ರಾಜ್ಯದ ಬಯಲುಸೀಮೆ ಪ್ರದೇಶದ 17 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುತ್ತದೆ. ಹಾಗಾಗಿ ಈ ಜಿಲ್ಲೆಗಳಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 'ಹಸಿರೀಕರಣ ಕಾರ್ಯಕ್ರಮ' ವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. 

ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳಲ್ಲಿ ಪರಿಸರ ಹೊಂದಾಣಿಕೆಯನ್ನು ಮಾಡುವ ಕುರಿತು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ವತಿಯಿಂದ ಮೌಲ್ಯಮಾಪನ ಮಾಡಲಾಗುವುದು.

ಡಿಕಾರ್ಬೊನೈಸೇಷನ್ನಿನ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮತ್ತು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲು, ರಾಜ್ಯದಲ್ಲಿನ ಸಂಸ್ಥೆಗಳಿಂದ ಸ್ವಯಂಪ್ರೇರಿತವಾಗಿ ಹೊರಸೂಸುವಿಕೆಯನ್ನು ಬಹಿರಂಗಪಡಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು.

SCROLL FOR NEXT