ಅದೊಂದು ಹಳ್ಳಿ. ಆದರೆ ಪ್ರಖ್ಯಾತ ಯಾತ್ರಾಸ್ಥಳ. ದೇಶದ ಮೂಲೆಮೂಲೆಯಿಂದ ಕಡು ಬಡವರಿಂದ ಹಿಡಿದು ಆಗರ್ಭ ಶ್ರೀಮಂತರೂ ಆಗಮಿಸುತ್ತಾರೆ. ಅಲ್ಲಿಗೆ ಬಂದು ತಂಗುವವರಿಗೆ ಮೂಲ ಸೌಲಭ್ಯಗಳೂ ಉಂಟು. ಪ್ಲಾಸ್ಟಿಕ್ ಹಣ ನಂಬಿ ಈ ಊರಿಗೆ ಬರಿಗೈ ಬಂದರೆ ಕಥೆ ಗೋವಿಂದ. ಮೂಲಸೌಕರ್ಯಗಳನ್ನು ಪಡೆಯಲು ಬೇಕಿರುವ 'ದುಡ್ಡೇ ದೊಡ್ಡಪ್ಪ' ಅಂತಾರಲ್ಲ, ಆ ದೊಡ್ಡಪ್ಪನಿಗೆ ಮಾತ್ರ ತತ್ವಾರ!
ಹ್ಞಾಂ..! ಆಗರ್ಭ ಶ್ರೀಮಂತರೂ ಬರುತ್ತಾರೆ ಎಂದರೆ ಅವರಿಗೇನು ಹಣದ ಕೊರತೆ ಎಂದು ಆಶ್ಚರ್ಯ ಪಡಬೇಡಿ. ಅವರ ಬ್ಯಾಂಕುಗಳ ಖಾತೆಯಲ್ಲಿ ಕೋಟಿಗಟ್ಟಲೆ ಹಣವಿದೆ. ಆದರೆ ಆ ಕ್ಷಣಕ್ಕೆ ಸಿಗುತ್ತಿಲ್ಲವಲ್ಲ. ಅದು ಇಲ್ಲಿನ ಪ್ರಮುಖ ಸಮಸ್ಯೆ. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಜಗತ್ತೇ ಹೇಳುತ್ತೆ. ಆದರೂ ನಿತ್ಯ ಸಾವಿರಾರು ಜನರು ಆಗಮಿಸುವ, ಲಕ್ಷಾನುಗಟ್ಟಲೆ ವ್ಯವಹಾರ ನಡೆಯುವ ಸ್ಥಳದಲ್ಲಿ ತಮ್ಮ ಖಾತೆಯಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಪಡೆಯಲಾಗದಿದ್ದರೆ ಏನು ಪ್ರಯೋಜನ?
ದೇಶದ ಕೋಟ್ಯಂತರ ಜನರ ಇಂತಹ ಅಸಹಾಯಕ ಸ್ಥಿತಿಯನ್ನು ಮನಗಂಡಿರುವ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ತನ್ನ ಅಧೀನದಲ್ಲಿರುವ ಎಲ್ಲ ಬ್ಯಾಂಕುಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಎಟಿಎಂ (ATM- Automated Teller Machine) ಕೇಂದ್ರಗಳನ್ನು ಸ್ಥಾಪಿಸುವಂತೆ ತಿಳಿಸಿದೆ. ಅದಕ್ಕೆ ಪ್ರಸಕ್ತ ಹಣಕಾಸು ವರ್ಷದ ಕೊನೆಯ ಅವಧಿಯೊಳಗಿನ ಗಡುವನ್ನೂ ನೀಡಿದೆ.
ಸರ್ಕಾರದ ಅಧೀನದಲ್ಲಿರುವ ಎಲ್ಲ ಬ್ಯಾಂಕುಗಳ ಗ್ರಾಹಕರಿಗೂ ಎಟಿಎಂ ಕಾರ್ಡ್ ವಿತರಿಸಬೇಕು. ಅವರಿಗೆ ಅನತಿ ದೂರದಲ್ಲೇ ಹಾಗೂ ಯಾವಾಗ ಬೇಕಾದಾರೂ ಹಣ ಪಡೆಯುವ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಪ್ರತಿ ಶಾಖೆಗೂ ಕಡ್ಡಾಯವಾಗಿ ಎಟಿಎಂ ಅಳವಡಿಸಬೇಕು ಎಂದು ಸೂಚಿಸಿದೆ. ಅಲ್ಲದೆ 2000 ಜನರು ವಾಸವಾಗಿರುವ ಪ್ರತಿ ಗ್ರಾಮ ಅಥವಾ ಹೋಬಳಿಯ ಗ್ರಾಹಕರೂ ಇದರಿಂದ ವಂಚಿತರಾಗಬಾರದು. ಕೇಂದ್ರ ಸರ್ಕಾರದ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಮಾಸಾಶನ ಯೋಜನೆ ಸಹಾಯಧನ(600) ನೇರವಾಗಿ ಅವರ ಖಾತೆಗಳಿಗೆ ಪಾವತಿಯಾಗುವಂತೆ ಡಿಬಿಟಿ (DBT- Direct Benefit Transfe) ಸೌಕರ್ಯಕ್ಕೂ ವರದಾನವಾಗಬೇಕೆಂದೂ ಹೇಳಿದೆ.
ಸದ್ಯದ ಸ್ಥಿತಿಗತಿ- ಯೋಜನೆ
2012-13ನೇ ಸಾಲಿನಲ್ಲಿ ಸರ್ಕಾರದ ಅಧೀನದಲ್ಲಿರುವ ಬ್ಯಾಂಕುಗಳಲ್ಲಿ ಸುಮಾರು 85,00,000 ಖಾತೆ ತೆರೆಯಲಾಗಿದೆ. ಇನ್ನೂ ಗ್ರಾಹಕ ಸ್ನೇಹಿ ಬ್ಯಾಂಕುಗಳಾಗುವ ನಿಟ್ಟಿನಲ್ಲಿ ಸರ್ಕಾರ ಇದಕ್ಕೆ ಪ್ರೇರೇಪಿಸುತ್ತಿದೆ. ದೇಶದ ಎಲ್ಲ ಕುಟುಂಬಗಳೂ ಕನಿಷ್ಠ ಒಂದಾದರೂ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಮಹಾತ್ವಾಕಾಂಕ್ಷೆ ಭಾರತೀಯ ಹಣಕಾಸು ಸಚಿವಾಲಯದ್ದಾಗಿದೆ. ಈ ಸಚಿವಾಲಯದ ಪ್ರಕಾರ- ದೇಶದಲ್ಲಿ ಒಟ್ಟು 24,66,92,667 ಕುಟುಂಬಗಳಿದ್ದು, ಅದರಲ್ಲಿ ಶೇ. 60 ಕುಟುಂಬಗಳು ಮಾತ್ರ ಬ್ಯಾಂಕ್ ಖಾತೆಗಳನ್ನು ಹೊಂದಿವೆ. ಇನ್ನುಳಿದ ಕುಟುಂಬಗಳನ್ನೂ ಬ್ಯಾಂಕ್ ಜಾಲಕ್ಕೆ ತಂದು ಗ್ರಾಹಕಸ್ನೇಹಿಯಾಗುವ ಮಹತ್ವಾಕಾಂಕ್ಷೆ ಉದ್ದೇಶವನ್ನು ಹೊಂದಿದೆ.
ಇದೇ ದಾರಿಯಲ್ಲಿ ಸಾಗಿರುವ ದಿ ಇಂಡಿಯನ್ ಬ್ಯಾಂಕ್ ಬ್ಯಾಂಕಿನ ಶಾಖೆಗಳಿಲ್ಲದ ಹಾಗೂ 2000 ಅಥವಾ ಅದಕ್ಕಿಂತ ಹೆಚ್ಚಿರುವ ಗ್ರಾಮೀಣ ಸ್ಥಳಗಳಲ್ಲಿಯೂ ಮೈಕ್ರೋ ಎಟಿಎಂ ಕೇಂದ್ರಗಳನ್ನು ತೆರೆಯುತ್ತಿದೆ. ಈ ಮೂಲಕ ಗ್ರಾಹಕರಿಗೆ ಹತ್ತಿರವಾಗಲು ಮುಂದಾಗಿದೆ.
ಎಟಿಎಂ ಕೇಂದ್ರಗಳಿಂದೇನು ಲಾಭ?
ನಮ್ಮ ಖಾತೆಯಲ್ಲಿರುವ ಹಣವನ್ನು ಯಾವ ಸಂದರ್ಭದಲ್ಲಾದರೂ ಸುಲಭವಾಗಿ ಪಡೆಯಬಹುದು.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕವೂ ಹಣವನ್ನು ಇತರ ಖಾತೆಗಳಿಗೆ ವರ್ಗಾಯಿಸಬಹುದು.
ನಮ್ಮಲ್ಲಿರುವ ಹಣವನ್ನು ಕಳೆದುಕೊಂಡಾಗ ಪಡೆಯಲು, ಹಣವಿಲ್ಲದವರಿಗೆ ನೆರವು ನೀಡಲು ಸಾಧ್ಯ.
ಹತ್ತಿರದ ಎಟಿಎಂನಿಂದಲೇ ಗ್ರಾಹಕರಿಗೆ ಅವರ ಖಾತೆಯ ಬಗೆಗಿನ ಸಂಪೂರ್ಣ ಮಾಹಿತಿ ನೀಡಲು ಸಾಧ್ಯ.
ಬ್ಯಾಂಕುಗಳಲ್ಲಿ ಸರದಿಯಲ್ಲಿ ನಿಲ್ಲುವುದು ತಪ್ಪುತ್ತದೆ. ಅಧಿಕಾರಿ, ಸಿಬ್ಬಂದಿ ಮೇಲಿನ ಹೊರೆ ಕಡಿಮೆ.
ಪ್ರವಾಸಿಗರು ಅಧಿಕ ಹಣವನ್ನು ತಮ್ಮ ಬಳಿಯಿಟ್ಟುಕೊಂಡು ಭಯದಲ್ಲಿ ಸಂಚರಿಸುವ ಪ್ರಮೇಯವಿಲ್ಲ
ಎಟಿಎಂ ಕೇಂದ್ರಗಳು ಗ್ರಾಹಕರ ಖಾತೆ ಸಂಪೂರ್ಣ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡಿರುತ್ತವೆ
ಗ್ರಾಹಕರು ತಮ್ಮ ಖಾತೆಯಲ್ಲಿ ಹೊಂದಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ದರೆ ಹಣ ಪಡೆಯಬಹುದು.
-ವೀರೇಶ ಜಿ. ಮಠ
mathvg@gmail.com