ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ರೂಪಗೊಂಡಿರುವ ನಗದಿನ ಕೊರತೆಯ ಪರಿಣಾಮ, ಅಲ್ಲಿನ ಸರ್ಕಾರಗಳು ತಮ್ಮಲ್ಲಿರುವ ಚಿನ್ನದ ದಾಸ್ತಾನನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕಟ್ಟಿವೆ. ಅಷ್ಟೊಂದು ಪ್ರಮಾಣದ ಚಿನ್ನವನ್ನು ಕೊಳ್ಳುವವರು ಕಡಿಮೆ. ಅದರ ಪರಿಣಾಮ ಬೆಲೆ ಕುಸಿತ. ಇದೇ ಸಮಯದಲ್ಲೇ ತೈಲ ಬೆಲೆಯೂ ಬಿದ್ದಿದೆ. ಇದು ಪರಸ್ಪರ ಸಂಬಂಧವಿರುವ ವ್ಯವಹಾರ. ಇಲ್ಲಿ ಚಿನ್ನದ ಬೆಲೆ ಪೇಟೆಯಲ್ಲಿ ಕುಸಿದಿರುವುದರ ಪರಿಣಾಮ ಅದನ್ನು ಬಳಕೆಗೋ (ಒಡವೆ) ಅಥವಾ ಆಪದ್ಧನವೆಂದು (ಸವರನ್ ರೂಪದಲ್ಲಿ) ಸಂಗ್ರಹಿಸಿಟ್ಟುಕೊಳ್ಳುವ ಜನವರ್ಗಕ್ಕೆ ಸ್ವಲ್ಪ ಒಳ್ಳೆಯದಾಗಿರಬಹುದು.
ಆದರೆ, ಚಿನ್ನದ ಬೆಲೆಯ ಇಳಿತದ ಪ್ರಕ್ರಿಯೆ ಬೃಹತ್ ಪ್ರಮಾಣದಲ್ಲಿ ಅದರಲ್ಲಿ ಕೊಳ್ಳುವ- ಮಾರುವ, ವ್ಯವಹಾರ ನಡೆಸುವ ವಲಯದ ಮೇಲೆ ದೊಡ್ಡ ರೀತಿಯ ಪರಿಣಾಮವಾಗುವುದು ಖಚಿತ. ಇದರಿಂದ ಅನೇಕ ರಾಷ್ಟ್ರಗಳ ಕರೆನ್ಸಿಯ ಮೌಲ್ಯವೂ ಕಡಿಮೆಯಾಗಬಹುದು.
ಭಾರತದ ಬ್ಯಾಂಕ್‌ಗಳ ವಿದೇಶಿ ಹಣದ ಸಂಗ್ರಹದ ಒಂದು ದೊಡ್ಡ ಅಂಶ ಚಿನ್ನದ ರೂಪದಲ್ಲೇ ಇದೆ. ಅದನ್ನು ನಿಭಾಯಿಸುವ ಶಕ್ತಿ ಆರ್ಥಿಕ ವ್ಯವಸ್ಥೆಗೆ, ರಿಸರ್ವ್ ಬ್ಯಾಂಕಿಗೆ ಇದೆ. ಹೇಗಿದ್ದರೂ ಸಾಮಾನ್ಯ ಜನರು ಈ ವ್ಯವಹಾರದಿಂದ ದೂರವೇ.
ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ನೂತನ ವರ್ಷದ ಮೊದಲ ಹಣ ನೀತಿಯಲ್ಲಿ ಬಡ್ಡಿ ದರಗಳ ಇಳಿತವನ್ನು ವಾಣಿಜ್ಯೋದ್ಯಮ ವಲಯ ನಿರೀಕ್ಷಿಸಿದೆ. ಆ ಕಾರಣದಿಂದಲೇ ಈಗ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದು.
ಈಚಿನ ದಿನಗಳಲ್ಲಿ ಬ್ಯಾಂಕ್ ಷೇರುಗಳ ಬೆಲೆಯಲ್ಲಿ 15-20 ರುಪಾಯಿಗಳಷ್ಟು ಏರಿಕೆ ಕಂಡುಬಂದಿದ್ದು ನಿಜ. ಅದರಲ್ಲೂ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ.
ಅನ್‌ಫ್ಲೇಮ್ ದರವೂ ಸ್ವಲ್ಪ ಇಳಿದಿದೆ. ನಿಜವಾದ ಬಡ್ಡಿದರ ಇನ್ನೂ ಇಳಿಯಬಹುದು. ಇದೊಂದು ಹೊಸ ಸಂಗತಿ.
ಸಕ್ಕರೆ ಬೆಲೆ ಇಳಿತ
ಸಕ್ಕರೆ ಉದ್ಯಮದ ಮೇಲಿನ ನಿಯಂತ್ರಣವನ್ನು ಬಹುಮಟ್ಟಿಗೆ ಸಡಿಸಿಲಿಸದ ಮೇಲೆ ನಿಧಾನವಾಗಿ ಸಕ್ಕರೆ ಬೆಲೆ ಇಳಿಯುತ್ತಿದೆ. ಈಗ ಸಕ್ಕರೆ ಕಾರ್ಖಾನೆಗಳಿಗೆ ಲೆವಿ ಸಕ್ಕರೆಯ ಹೊರೆ ಇಲ್ಲ.
ಆದರೆ ಇದರಿಂದ ಸಕ್ಕರೆ ಕಂಪನಿಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಪಾವತಿಯ ಪ್ರಕ್ರಿಯೆಯಲ್ಲಿ ಎಡರುತೊಡರುಗಳಿವೆ. ಪ್ರಕಟಿತ ಅಂದಾಜಿನಂತೆ, ಇಡೀ ದೇಶದಲ್ಲಿ, ಸಕ್ಕರೆ ಉದ್ಯಮಿಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಬಾಕಿ ಹಣ 12,300 ಕೋಟಿ ರುಪಾಯಿಗಳು. ಕರ್ನಾಟಕದಲ್ಲೇ ರೈತರಿಗೆ 1700 ಕೋಟಿ ರುಪಾಯಿಗಳ ಬಾಕಿ ಬರಬೇಕು.
ಇಂಥ ವಿಚಾರಗಳ ಪರಿಶೀಲನೆಗೆ ಇದಲ್ಲ ಸಮಯ.
ಶಾರದಾ ಚಿಟ್ ಫಂಡ್ ವಾರ್ತೆ
ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಫಂಡ್ ಸಂಸ್ಥೆಯ ಹಗರಣದಲ್ಲಿ ನೊಂದ ಠೇವಣಿದಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಒಂದು ವಿಶೇಷ ನಿಧಿ ಸ್ಥಾಪಿಸಿದೆ. ಅದಕ್ಕೆ ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಹಣ ಮಾಡುವುದು. ಈ ಸಂಸ್ಥೆಯ ವ್ಯವಹಾರ- ಅವ್ಯವಹಾರ ದಿಢೀರನೆ ಗಮನಕ್ಕೆ ಬಂದಿದ್ದಲ್ಲ, ಡಿಸೆಂಬರ್‌ನಲ್ಲೇ ಸೂಚನೆ ಇತ್ತು, ಯಾರೂ ಕೇಳಲಿಲ್ಲ.
ಚಿಟ್ ಫಂಡ್‌ನಿಂದ ಸಂಗ್ರಹಿಸಿದ ಹಣದಲ್ಲಿ ಸಂಸ್ಥೆಯ ಮಾಲಿಕರು ಮಾಧ್ಯಮ ಪ್ರಪಂಚವನ್ನೇ ಆಳಲಿಕ್ಕೆ ಹೊರಟಿದ್ದು ನಿಜ. ಆ ಹಣದಿಂದ ಅಪಾರ ಜಾಹೀರಾತು ಪತ್ರಿಕೆಗಳಿಗೆ ಸಿಕ್ಕಿತ್ತು. ಹಲವು ಹೊಸ ಚಾನಲ್‌ಗಳು, ದೈನಿಕಗಳು, ನಿಯತಕಾಲಿಕಗಳೂ ಆರಂಭವಾದವು. ಅದೇನೂ ಒಳ್ಳೆಯ ಬೆಳವಣಿಗೆ ಅಲ್ಲ.
ಕೊನೆ ಮಾತು
ಜಾರಿಯಲ್ಲಿರುವ ಬಡ್ಡಿದರಕ್ಕಿಂತ ವಿಪರೀತ ಹೆಚ್ಚಿನ ಪ್ರಮಾಣದ ಬಡ್ಡಿಯನ್ನು ಯಾವ ವ್ಯಾಪಾರದಿಂದಲೂ, ಯಾರಿಂದಲೂ ಕೊಡುವುದು ಅಸಾಧ್ಯ. ಅಂಥ ವ್ಯಾಪಾರಕ್ಕೆ ಕೈ ಹಾಕಲೇಬೇಡಿ. ಅಧಿಕ ಬಡ್ಡಿಯ ಆಸೆ ದುರಾಸೆ.
- ಸತ್ಯ