ಹೊಸ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕ ಸಮೀಕ್ಷೆ ಹಾಗೂ ಹೊಸ ನೀತಿಯ ಪ್ರಕಟಣೆಯ ಸಮಯದಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಸುಬ್ಬರಾವ್ ಅವರು ಬ್ಯಾಂಕ್ ಬಡ್ಡಿ ದರವನ್ನು ಇಳಿಸುವ ಸಂಭವವಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಪಂಡಿತ ಪಾಮರರೆಲ್ಲರಿಗೂ ಗೊತ್ತಿದ್ದರೂ, ಅವರೆಲ್ಲರ ಮನಸ್ಸಿನ ಒಂದು ಮೂಲೆಯಲ್ಲಿ ಮನೆ ಮಾಡಿದ್ದ ಆಸೆ: ಪ್ರಧಾನಿ ಮನಮೋಹನ ಸಿಂಗ್, ವಿತ್ತ ಮಂತ್ರಿ ಚಿದಂಬರಂ ಅವರಿಬ್ಬರೂ ಪರೋಕ್ಷವಾಗಿ, ಪ್ರತ್ಯಕ್ಷವಾಗಿ, ಅಂತರಂಗದಲ್ಲಿ ಒತ್ತಾಯಮಾಡುವುದರಿಂದ ಸುಬ್ಬರಾಯರ ಮನಸ್ಸೂ ಬದಲಾಯಿಸಬಹುದು.
ಹಾಗಾಗಲಿಲ್ಲ. ಸುಬ್ಬರಾವ್, ರಿಸರ್ವ್ ಬ್ಯಾಂಕಿನ ಆಡಳಿತ ತಜ್ಞರ ಅಭಿಪ್ರಾಯವನ್ನು ಕಡೆಗಣಿಸಿ, ರುಪಾಯಿಯ ಮೌಲ್ಯವನ್ನು ಡಾಲರ್ ವಿರುದ್ಧ ಹೇಗಾದರೂ ರಕ್ಷಿಸಲು ಮುಂದಾಗಿ ಬಡ್ಡಿದರಗಳನ್ನು ಇಳಿಸಲಿಲ್ಲ.
ಇದರ ಅರ್ಥವೇನು?
ಅಗ್ಗದ ಸಾಲವನ್ನು ಪೇಟೆಗೆ ಬಿಟ್ಟರೆ, ಹಣದ ಹರಿವು ಹಾಗೂ ಲಭ್ಯತೆ ವಿಪರೀತವಾಗಿ, ಅಂತಾರಾಷ್ಟ್ರೀಯ ನಾಣ್ಯ ಪೇಟೆಯಲ್ಲಿ ಜೂಜು ಆರಂಭವಾಗುವುದು ಅವರಿಗೆ ಬೇಕಾಗಿರಲಿಲ್ಲ.
ರಿಸರ್ವ್ ಬ್ಯಾಂಕಿನ ಈ ನಿರ್ಧಾರದಿಂದ ಚಿದಂಬರಂ ಹಿಂದೆ ಘೋಷಿಸಿದ್ದಂತೆ ಪ್ರಗತಿಯ ಪಥದಲ್ಲಿ ಸರ್ಕಾರ ಏಕಾಂಗಿಯಾಗಿಯೇ ನಡೆಯಬೇಕು. ಆದರೆ ದೆಹಲಿಯ ಪಂಡಿತರು, ಸರ್ಕಾರದ ಚಿಂತನೆಯನ್ನು ಬಲ್ಲವರ ಪ್ರಕಾರ, ಸುಬ್ಬರಾಯರ ನಿಲವನ್ನು ಪ್ರಧಾನಿ ಮನಮೋಹನ ಸಿಂಗ್ ಅಂತರಂಗದಲ್ಲಿ ಒಪ್ಪಿದ್ದಾರೆ. ಅವರ ಸಲಹೆಗಾರ ರಂಗರಾಜನ್ ಬಹಿರಂಗವಾಗಿಯೇ ಹೊಗಳಿದ್ದಾರೆ.
ಈ ನೀತಿಯ ಪರಿಣಾಮ, ಬ್ಯಾಂಕ್ಗಳಿಗೆ ಹಣದ ಒಳ ಹರಿವು ಕಡಿಮೆಯಾಗುತ್ತದೆ. ಆದ್ದರಿಂದ ಸಾಲವನ್ನು ದುಬಾರಿ ಮಾಡಲೇಬೇಕಾದ ಅನಿವಾರ್ಯತೆ ಸಣ್ಣಪುಟ್ಟ ಬ್ಯಾಂಕ್ಗಳಿಗೆ ಕಂಡುಬಂದಿದೆ. ಕಾರು ಸಾಲ- ಮನೆ ಸಾಲದ ಬಡ್ಡಿಯನ್ನು ಹೆಚ್ಚಿಸಲು ಎಸ್ ಬ್ಯಾಂಕ್ ನಿರ್ಧರಿಸಿದೆ.
ದೇಶದ ಅತಿ ದೊಡ್ಡ ಲೇವಾದೇವಿ ಸಂಸ್ಥೆ ಎನಿಸಿದ ಭಾರತೀಯ ಸ್ಟೇಟ್ ಬ್ಯಾಂಕ್ ಇನ್ನು ಮೂರು ವರ್ಷದ ಅನಂತರ ಸೂಕ್ತ ನಿರ್ಧಾರವನ್ನು ಪ್ರಕಟಿಸಲಿದೆಯಂತೆ. ಇದರಿಂದ ಕಾರ್ಪೋರೇಟ್ ವಲಯ ತಣ್ಣಗಾಗಿದೆ.
ಇದೆಲ್ಲ ನಡೆದಿರುವುದು ವಿತ್ತಮಂತ್ರಿಯಾಗಿ ಚಿದಂಬರಂ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಮುಗಿದ ಸಂತಸದ ವಾರ್ಷಿಕೋತ್ಸವದ ದಿನ. ಆಗ ಚಿದಂಬರಂ ಬೇಕಾದಷ್ಟು ಸಂದರ್ಶನಗಳನ್ನು ನೀಡಿದ್ದಾರೆ, ಎಲ್ಲದರ ಸಾರಾಂಶ ಒಂದೇ... ಕಷ್ಟ ಕಾಲ ಬಂದಿದೆ ನಿಜ. ಆದರೆ ಅದನ್ನು ಸರಿಪಡಿಸಲು ನನ್ನ ಬಳಿ ದಿವ್ಯೌಷಧಿ ಇಲ್ಲವಲ್ಲ. ಕಷ್ಟಪಟ್ಟು ಪರಿಸ್ಥಿತಿ ನಿಭಾಯಿಸಬೇಕು. ವಾರ್ಷಿಕ ಕೊರತೆ ಕುರಿತು ಕೊಟ್ಟ ವಚನ ಪಾಲಿಸ್ತೀನಿ.
ಷೇರು ಬಜಾರಿಗೆ ಇದು ಸಮಾಧಾನದ ವಿಚಾರವಲ್ಲ. ಕಾರ್ಪೋರೇಟ್ ವಲಯಕ್ಕೂ ಅಷ್ಟೇ. ಸರ್ಕಾರ ಈ ಹಂತದಲ್ಲಾದರೂ ಸುಧಾರಣೆಯ ಎರಡನೇ ಮಜಲನ್ನು ಏರಲೇಬೇಕೆಂದು ಈ ವಲಯದ ಒತ್ತಾಯ. ಅಯ್ಯಯ್ಯೋ ಅದು ಎಲ್ಲಾದರೂ ಸಾಧ್ಯವೇ? ಇನ್ನು ಒಂಬತ್ತು ತಿಂಗಳಲ್ಲಿ ಚುನಾವಣೆ!
ಕೊನೆ ಮಾತು
ಚಿದಂಬರಂ- ಸುಬ್ಬರಾವ್ ಮುಖಾಮುಖಿ ಇದೇ ಕೊನೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸುಬ್ಬರಾಯರು ನಿವೃತ್ತರಾಗಬೇಕು. ರಿಸರ್ವ್ ಬ್ಯಾಂಕ್ ಗವರ್ನರ್ ಪೀಠಕ್ಕೆ ಈಗ ಕಾಂಗ್ರೆಸ್ ಪಂಡಿತರಿಗೆ ಹುಡುಕಾಟ ಆರಂಭ.
- ಸತ್ಯ