ಸಾಲ ಮಾಡಿಯಾದ್ರೂ ತುಪ್ಪ ತಿನ್ನು, ಗೋಳು ಪರದಾಟ ಸಾಕಿನ್ನು...
ಈ ಹಾಡು ಸದ್ಯ ದುಡ್ಡಿಲ್ಲದ 'ದುನಿಯಾ'ದಲ್ಲಿ ಪ್ರಚಲಿತದಲ್ಲಿದೆ. ಡಾಲರ್ ಸೇರಿದಂತೆ ಇತರ ದೇಶಗಳ ಕರೆನ್ಸಿ ಎದುರು ರುಪಾಯಿ ಮೌಲ್ಯ ಕುಸಿತ ಗ್ರಾಹಕರು ಹಾಗೂ ಕ್ರೆಡಿಟ್ ಕಾರ್ಡ್ ಬಿಸಿನೆಸ್ ಮಾಡುತ್ತಿರುವವರ ನಿದ್ದೆ ಕೆಡಿಸಿದೆ. ಇದರಿಂದ ಮುಕ್ತಿ ಹೊಂದಲು ಕಂಪನಿಗಳು 'ಪ್ಲಾಸ್ಟಿಕ್ ಕಾರ್ಡ್'ಗಳ ಮೂಲಕ ಹೊಸ ದಾರಿ ಕಂಡುಕೊಂಡಿವೆ.
ಕಳೆದ ಒಂದು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣ ಬ್ಯಾಂಕುಗಳು ಗ್ರಾಹಕರು ಹಾಗೂ ವಿವಿಧ ಕಂಪನಿಗಳು ರೂಪಿಸಿದ ಆಕರ್ಷಕ ಯೋಜನೆಗಳು. ಝಿರೋ ಪರ್ಸೆಂಟ್ ಬಡ್ಡಿದರ, ಇಎಂಐ ವ್ಯವಹಾರ, ಯುಟಿಲಿಟಿ ಪೇಮೆಂಟ್, ಮೊಬೈಲ್ ಪಾವತಿ, ಆಭರಣ ಖರೀದಿ, ಪ್ರವಾಸ ಹೀಗೆ ವಿವಿಧ ಕಾರಣಗಳಿಂದ 'ಪ್ಲಾಸ್ಟಿಕ್ ಕಾರ್ಡ್' ಬಳಕೆ ಗಣನೀಯವಾಗಿ ಹೆಚ್ಚಿದೆ.
ಭಾರಿ ವ್ಯವಹಾರ
ಆರ್‌ಬಿಐ ಪ್ರಕಾರ ವರ್ಷದಿಂದ ವರ್ಷಕ್ಕೆ ಪ್ಲಾಸ್ಟಿಕ್ ಕಾರ್ಡ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. 2011ರಲ್ಲಿ ಈ ಕಾರ್ಡುಗಳ ಮೂಲಕ 7,981 ಕೋಟಿ ವ್ಯವಹಾರ ನಡೆದಿದೆ. ಈ ವರ್ಷ ಅದರ ಪ್ರಮಾಣ 12,597 ಕೋಟಿ ಎಂದು ಅಂದಾಜಿಸಲಾಗಿದೆ. ಅಂದರೆ ಕಳೆದ ಎರಡು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ವ್ಯವಹಾರ ಶೇ.45 ಏರಿಕೆ ಕಂಡಿದೆ.
ಇಎಂಐ ಮೇಲೆ ಝಿರೋ ಬಡ್ಡಿದರ
ಇಎಂಐ ಝೀರೋ ಬಡ್ಡಿದರದಲ್ಲಿ ಮೊಬೈಲ್ ಕಂಪನಿಗಳು ಸ್ಮಾರ್ಟ್ ಫೋನ್‌ಗಳನ್ನು ನೀಡುತ್ತಿವೆ. ಇಂತಹ ಕೆಲವೊಂದು ಕಾರಣಗಳು ಸರಾಸರಿಗಿಂತ ಹೆಚ್ಚಿನ ಖರೀದಿ ಮಾಡುವ ಹಾಗೆ ಮಾಡಲು ಪ್ರೋತ್ಸಾಹಿಸುತ್ತಿವೆ. ಉದ್ದೇಶಪೂರ್ವಕವಾಗಿ ಗ್ರಾಹಕರ ಜೀವನ ಶೈಲಿ ಹಾಗೂ ನಡತೆಯಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೆಚ್ಚಿನ ಗ್ರಾಹಕರು ಉತ್ತಮ ಬ್ರಾಂಡೆಡ್ ವಸ್ತುಗಳನ್ನು ಬಳಸಲು ಶುರು ಮಾಡಿದ್ದಾರೆ. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿವೆ. ಅದಕ್ಕೆ ತಕ್ಕ ಹಾಗೆ ಗ್ರಾಹಕರು ಕೂಡ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಗಿಂದಾಗ್ಗೆ ಬದಲಾಯಿಸುತ್ತ, ಹೊಸ ಹೊಸ ಮಾದರಿ ವಸ್ತುಗಳನ್ನು ಕೊಳ್ಳಲು ಮುಂದಾಗಿದ್ದಾರೆ.
ಕಾರೂ ಕೊಳ್ಳಬಹುದು
ಗ್ರಾಹಕರ ಆಸಕ್ತಿ ಕೇವಲ ಮೊಬೈಲ್, ಸ್ಮಾರ್ಟ್ ಫೋನ್‌ಗಳಿಗಷ್ಟೇ ಉಳಿದಿಲ್ಲ. ಅದನ್ನೂ ಮೀರಿ ಫ್ರಿಡ್ಜ್, ಎಲ್‌ಇಡಿ ಟಿವಿಗಳು, ಕಾರುಗಳನ್ನು ಕೊಳ್ಳಲು ಮುಂದಾಗಿದ್ದಾರೆ. ಅದರಲ್ಲೂ ಹೆಚ್ಚಿನ ಭಾರತೀಯ ಮಧ್ಯಮ ವರ್ಗದ ಜನರಲ್ಲಿ ಇಂತಹ ಟ್ರೆಂಡ್‌ಗೆ ಬದಲಾಗುವ ಲಕ್ಷಣಗಳು ಕಂಡುಬರುತ್ತಿವೆ. ಇಎಂಐ ಮತ್ತು ಪಿಒಎಸ್(ಪಾಯಿಂಟ್ ಆಫ್ ಸೇಲ್) ಸೌಲಭ್ಯ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಖ್ಯಾತ ಕಂಪನಿಗಳಲ್ಲೊಂದಾದ ಟಾಟಾ ಕೂಡ ನ್ಯಾನೋ ಹಾಗೂ ಇನ್ನಿತರ ಕಾರುಗಳನ್ನು ಕೊಳ್ಳಲು ಯಾವುದೇ ರೀತಿ ಬಡ್ಡಿ ಪಡೆಯದೆ ಒಂದು ಲಕ್ಷ ಹಣಕ್ಕೆ 8 ಸಾವಿರ ತಿಂಗಳು ಪೇಮೆಂಟ್‌ನಂತೆ ವರ್ಷದ ವಾಯಿದೆ ನೀಡುತ್ತಿವೆ. ಈ ಯೋಜನೆಗಳು ಜನರು ಸ್ವಂತ ಕಾರು ಕೊಳ್ಳಲು ಸಹಕಾರಿಯಾಗಿವೆ.
ಮಾರುಹೋದ ಗ್ರಾಹಕರು
ಬ್ಯಾಂಕ್ ಹಾಗೂ ಕಾರ್ಡ್ ಕಂಪನಿಗಳು ವಿಟ್‌ನೆಸ್‌ನಿಂದ ಉತ್ತಮ ಲಾಭ ಪಡೆದುಕೊಳ್ಳುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಶೇ.30ರಿಂದ ಶೇ.40ಕ್ಕೆ ಹೆಚ್ಚಾಗಿದೆ. ಕ್ರೆಡಿಟ್ ಕಾರ್ಡ್‌ಗಳಿಂದ ನಂಬಲಾಗದ ರೀತಿಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದೆ. ಹೊಸ ಸ್ಕೀಮ್‌ಗಳು ಹಾಗೂ ಝೀರೋ ಪರ್ಸೆಂಟ್ ಬಡ್ಡಿದರದಿಂದ ಕಳೆದ ಒಂದು ವರ್ಷದಲ್ಲಿ ಬದಲಾವಣೆಯಾಗಿದೆ ಎನ್ನುತ್ತಾರೆ ಬ್ಯಾಂಕರ್‌ಗಳು.
ಈ ಕಂಪನಿಗಳ ಭರವಸೆಗಳು ಕೊಳ್ಳುವ ಮನಸ್ಸುಗಳನ್ನು ಚಿಗುರೊಡೆಸುತ್ತಿವೆ. ಹೆಚ್ಚಿನ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್, ವಿಶೇಷವಾಗಿ ಸೇವಿಂಗ್ಸ್‌ಗೆ ಹೆಚ್ಚಿನ ಒತ್ತು ನೀಡುತ್ತಿವೆ. ಹಾಗಾಗಿ ಎಲ್ಲ ಮೂಲಗಳಿಂದಲೂ ಕ್ರೆಡಿಟ್ ಕಾರ್ಡ್ ಹೆಚ್ಚಿನ ಜನ ಕೊಳ್ಳಲು ಮುಂದೆ ಬರುತ್ತಿದ್ದಾರೆ.
ನಿಧಾನವಾಗಿ ಮೊಬೈಲ್ ಬ್ಯಾಂಕಿಂಗ್‌ಗಳು ಕಡಿಮೆಯಾಗುತ್ತಿವೆ. ಭವಿಷ್ಯದಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಮಾಸ್ಟರ್‌ಕಾರ್ಡ್‌ಗಳು ಲಾಂಚ್ ಆಗುತ್ತಿವೆ. ಪ್ರೀ ಪೇಯ್ಡ್ ಕಾರ್ಡ್‌ಗಳನ್ನು ಬಳಸಲು ಹೆಚ್ಚಿನ ಗ್ರಾಹಕರು ಪ್ರಾರಂಭಿಸಿದ್ದಾರೆ.
- ಎನ್.ಎಲ್. ಶಿವಮಾದು
shivamadhu2009@gmail.com