ಯೋಜನಾ ಆಯೋಗದ 'ಬಡತನ ರೇಖೆ ವ್ಯಾಖ್ಯಾನ' ವಿವಾದಕ್ಕೆ ಕಾರಣವಾದದ್ದು ಹಳೆಯ ಸಂಗತಿ. ಕೆಲ ದಿನಗಳ ಹಿಂದೆ 12ಕ್ಕೆ ಹೊಟ್ಟೆತುಂಬಾ ಊಟ ಸಿಗುತ್ತದೆ ಎಂದು ಕೆಲ ರಾಜಕೀಯ ನಾಯಕರು ಹೇಳಿದ್ದೂ ಕೂಡ ಭಾರಿ ಸುದ್ದಿಯಾಗಿತ್ತು. ಸದ್ಯ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ 'ಬಡತನ ರೇಖೆ' ಎಂದರೇನು, ಯಾವ ರೀತಿ ಅದನ್ನು ನಿರ್ಧರಿಸಲಾಗುತ್ತದೆ?
ಬಡತನ ರೇಖೆ ಎಂದರೆ
ಬಡತನ ರೇಖೆ ಎಂದರೆ 'ಆದಾಯದ ಮೂಲ' (threshold income). ಈ ಮಿತಿಯಿಂದ ಕೆಳಗೆ ಜೀವಿಸುವವರನ್ನು 'ಬಡವರು' ಎಂದು ಪರಿಗಣಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬಡತನ ರೇಖೆಯನ್ನು ನಿಗದಿಗೊಳಿಸಲು ಬೇರೆ ಬೇರೆ ಮಾನದಂಡಗಳನ್ನು ಬಳಸುತ್ತಾರೆ. ಅದಕ್ಕೆ ಆಯಾ ದೇಶಗಳ ಸಾಮಾಜಿಕ, ಆರ್ಥಿಕ ಮಾನದಂಡಗಳನ್ನು ಬಳಸಿಕೊಳ್ಳುತ್ತಾರೆ.
ನಮ್ಮಲ್ಲಿ ವ್ಯವಸ್ಥೆ
ಕೇಂದ್ರ ಯೋಜನಾ ಆಯೋಗ ದೇಶದಲ್ಲಿನ ಬಡತನ ಮಿತಿ ನಿಗದಿಗೊಳಿಸುತ್ತದೆ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ನಿಗದಿಪಡಿಸಿದ ಬಳಕೆದಾರರ ವೆಚ್ಚದ ಮಾಪಕವನ್ನು ಆಧರಿಸಿ ನಮ್ಮ ದೇಶದಲ್ಲಿ ಬಡತನ ರೇಖೆಯನ್ನು ಅಳತೆ ಮಾಡುತ್ತಾರೆ.
ದೇಶದಲ್ಲಿ ಬಡತನ ರೇಖೆ
1979ರಲ್ಲಿ ಅಧ್ಯಯನ ತಂಡವೊಂದು ಸಿದ್ಧಪಡಿಸಿದ ಮಾದರಿ ಸಮೀಕ್ಷೆಯಡಿ ಇದುವರೆಗೆ ಅಧ್ಯಯನ ನಡೆಸಲಾಗುತ್ತಿತ್ತು. 2011ರಲ್ಲಿ ಸುರೇಶ್ ತೆಂಡೂಲ್ಕರ್ ನೇತೃತ್ವದ ಸಮಿತಿ ಬಡತನ ರೇಖೆಯ ವ್ಯಾಖ್ಯೆಯನ್ನು ಬದಲಾಯಿಸಿತು. ಆಹಾರ, ವಿದ್ಯಾಭ್ಯಾಸ, ಆರೋಗ್ಯ, ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರದಲ್ಲಿ ಪ್ರತಿ ತಿಂಗಳು ಆಗುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ನಿಗದಿ ಮಾಡಿತು. ಅದರ ಪ್ರಕಾರ ಪ್ರತಿ ದಿನ 27.2 ಅನ್ನು ವೆಚ್ಚ ಮಾಡಲು ಸಾಧ್ಯವಿಲ್ಲದ ಗ್ರಾಮೀಣ ಪ್ರದೇಶದ ವ್ಯಕ್ತಿ ಮತ್ತು 33.3 ವೆಚ್ಚ ಮಾಡಲು ಸಾಮರ್ಥ್ಯವಿಲ್ಲದ ನಗರ ಪ್ರದೇಶದ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿರುವವರು ಎಂದು ನಿಗದಿ ಮಾಡಿತು. ಅಂದರೆ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿ ಕುಟುಂಬ ಪ್ರತಿ ತಿಂಗಳಿಗೆ 4,080 ಮತ್ತು ನಗರ ಪ್ರದೇಶದಲ್ಲಿರುವ ಪ್ರತಿ ಕುಟುಂಬ ರು. 5,000ಕ್ಕಿಂತ ಕಡಿಮೆ ವೆಚ್ಚ ಮಾಡುತ್ತಿದ್ದರೆ ಅದು ಬಡತನ ರೇಖೆಗಿಂತ ಕೆಳಗಿದೆ ಎಂದು ವ್ಯಾಖ್ಯಾನಿಸಲಾಯಿತು. ಈ ಲೆಕ್ಕಾಚಾರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ.
ಮುಂದಿನ ವರ್ಷ ಹೊಸ ವರದಿ
ವಿವಾದ ಉಂಟಾದ್ದರಿಂದ ಆರ್‌ಬಿಐ ಮಾಜಿ ಅಧ್ಯಕ್ಷ ಸಿ.ರಂಗರಾಜನ್ ನೇತೃತ್ವದಲ್ಲಿ ಹೊಸ ಸಮಿತಿ ರಚನೆ ಆಗಿದೆ. ಬದಲಾದ ಕಾಲಘಟ್ಟದಲ್ಲಿ ಯಾವ ರೀತಿ ಬಡತನ ರೇಖೆಯನ್ನು ವ್ಯಾಖ್ಯಾನಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ಮುಂದಿನ ವರ್ಷ ವರದಿ ಸಲ್ಲಿಸಲಿದೆ.
ಯಾಕೆ ಟೀಕೆ?
ತೆಂಡುಲ್ಕರ್ ಸಮಿತಿ ವರದಿ ಪ್ರಕಟಗೊಂಡಾಗ ಅದಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಡತನ ರೇಖೆಯ ವ್ಯಾಪ್ತಿಯನ್ನು ಕಡಿಮೆಗೊಳಿಸುವ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಧ್ಯಯನ ನಡೆಸದೆ ಅಂಕೆ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜಕೀಯ ಉದ್ದೇಶವಿದೆ ಎನ್ನುವುದು ಆರೋಪ.
ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ
ರಾಷ್ಟ್ರೀಯ ಸರಾಸರಿ ಶೇ.60ರಷ್ಟು ಕಡಿಮೆ ಆದಾಯ ಹೊಂದಿರುವ ಕುಟುಂಬವನ್ನು ಐರೋಪ್ಯ ರಾಷ್ಟ್ರದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವುದಾಗಿ ಘೋಷಿಸುತ್ತಾರೆ. ಅಂದರೆ ತೆರಿಗೆ ವಿಧಿಸಬಹುದಾದ ಆದಾಯ ಹೊಂದಿರುವ ಕುಟುಂಬ. ಆದರೆ ಅಮೆರಿಕದಲ್ಲಿ ಇದಕ್ಕಿಂತ ಸರಳ ಲೆಕ್ಕಾಚಾರವನ್ನು ಬಳಸುತ್ತಾರೆ. ಕುಟುಂಬಕ್ಕೆ ಅಗತ್ಯವಾಗಿರುವ ಆಹಾರಕ್ಕೆ ವೆಚ್ಚವಾಗುವ ಮೊತ್ತವನ್ನು ಗುಣಿಸಬೇಕು.
ಆಫ್ರಿಕಾ ಖಂಡ ಮತ್ತು ಭಾರತ
ಬಡತನ ರೇಖೆಯ ವ್ಯಾಖ್ಯೆಯನ್ನು ಆಫ್ರಿಕಾ ಖಂಡ ಮತ್ತು ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ, ಆಫ್ರಿಕಾ ಖಂಡದ್ದೇ ಉತ್ತಮವಾಗಿದೆ. ಅಲ್ಲಿ ಮೂರು ಮಾದರಿಗಳನ್ನು ಅನುಸರಿಸುತ್ತಾರೆ. ಆಹಾರ, ಮಧ್ಯಮ ಮತ್ತು ಮೇಲ್ವರ್ಗ. ಈ ಮೂರು ಮಾದರಿಯ ವ್ಯಾಪ್ತಿಯಲ್ಲಿ ಬರುವ ಆಫ್ರಿಕಾ ಖಂಡದ ಜನರು ನಮ್ಮ ದೇಶಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ.
ಬಡ ಅಂಕೆ