ವಾಣಿಜ್ಯ

ಕೋಲ್ ಇಂಡಿಯಾಗೆ 1173 ಕೋಟಿ ದಂಡ

ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲ ಗಣಿಗಾರಿಕೆ ಸಂಸ್ಥೆಯಾದ ಕೋಲ್ ಇಂಡಿಯಾ ಲಿ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದು. ಇಂತಹ ಸಂಸ್ಥೆಯಿಂದ ಸರ್ಕಾರ- ಜನ ನ್ಯಾಯವಾದ ವ್ಯವಹಾರವನ್ನು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. ಆ ಸಂಸ್ಥೆ ಈಗ ಗುತ್ತೇದಾರಿ ಏಕಸ್ವಾಮ್ಯ ಸಂಸ್ಥೆ.

ದೇಶದ ಉದ್ಯಮ ವಲಯದಲ್ಲಿ, ಸ್ಪರ್ಧೆಯಲ್ಲಿ ಅನಾರೋಗ್ಯಪರ ಪ್ರವೃತ್ತಿಗಳನ್ನು ತಡೆಗಟ್ಟಲು, ಅಂತಹ ಕೃತ್ಯಗಳು ನಡೆದರೆ ಸಂಬಂಧಪಟ್ಟ ಸಂಸ್ಥೆಯನ್ನು ಶಿಕ್ಷಿಸಲು ಸ್ಪರ್ಧಾ ಆಯೋಗ ಎನ್ನುವ ನಿಯಂತ್ರಣ ಸಂಸ್ಥೆ ಇದೆ. ಕಳೆದ ವಾರ, ಸ್ಪರ್ಧಾ ಆಯೋಗ ಹಾಗೂ ಕೋಲ್ ಇಂಡಿಯಾ ಲಿಮಿಟೆಡ್ ದೊಡ್ಡ ರೀತಿಯಲ್ಲೇ ಸುದ್ದಿಯ ಸುಳಿಯಲ್ಲಿ ಸಿಕ್ಕಿಬಿದ್ದಿದ್ದವು. ಕೋಲ್ ಇಂಡಿಯಾ ಹಾಗೂ ಅದರ ಮೂರು ಅಧೀನ ಸಂಸ್ಥೆಗಳಿಗೆ, ಆಯೋಗ 1773 ಕೋಟಿ ರುಪಾಯಿಗಳ ದಂಡ ವಿಧಿಸಿತ್ತು. ಸರ್ಕಾರಿ ಸಂಸ್ಥೆಯೊಂದಕ್ಕೆ ಆಯೋಗ ದಂಡ ವಿಧಿಸಿದ್ದು ಇದೇ ಮೊದಲ ಬಾರಿಗೆ.

ಕೋಲ್ ಇಂಡಿಯಾ ಸಂಸ್ಥೆಯ ಮೇಲೆ ಇದ್ದ ಹಾಗೂ ಋಜುವಾತಾದ ಆರೋಪ: ಕಲ್ಲಿದ್ದಲ ಬೆಲೆ ನಿಗದಿಯಲ್ಲಿ ಸ್ವೇಚ್ಛಾಚಾರದ ಮನೋಧರ್ಮದ ಪ್ರದರ್ಶನ, ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ.
ದೂರುದಾರ ಕಂಪೆನಿಯೂ ಸರ್ಕಾರಿ ವಲಯದ್ದೇ: ಮಹಾರಾಷ್ಟ್ರ ವಿದ್ಯುತ್ ಉತ್ಪಾದನಾ ನಿಗಮ.

ಇದು ಸಣ್ಣ ವಿಚಾರವಲ್ಲ. ಏಕಸ್ವಾಮ್ಯ ಗುತ್ತೇದಾರಿ ಪದ್ಧತಿಯನ್ನು ಒಪ್ಪಿದರೆ ಇದನ್ನೆಲ್ಲ ಅನುಭವಿಸಲೇಬೇಕು ನಿಜ. ದಂಡದ ಹಣ ಸರ್ಕಾರದ ಬೊಕ್ಕಸಕ್ಕೇ ಸೇರುತ್ತದೆ. ಹಾಗೆಂದ ಮಾತ್ರಕ್ಕೇ ವ್ಯಾಪಾರ ಧರ್ಮಕ್ಕೆ ತಿಲಾಂಜಲಿ ಕೊಡಬೇಕಾಗಿಲ್ಲವಲ್ಲ. ಕಲಿಯಬೇಕಾದ ಪಾಠ: ಸರ್ಕಾರಿ- ಸಾವ್ಕಾರಿ ಸಂಸ್ಥೆಗಳಿಗೆ ಏಕಸ್ವಾಮ್ಯ ಇರಬಾರದು.

ಬಿಜೆಪಿ ಗೆಲವು: ಸೂಚ್ಯಂಕ ಮೇಲೆ
ಈಚಿನ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿರುವ ಒಂದೇ ಕಾರಣಕ್ಕಾಗಿ ಷೇರು ಬಜಾರು ಭಾರಿ ಪಟಾಕಿ ಹಬ್ಬವನ್ನೇ ಆಚರಿಸಿದೆ. ಮುಂಬೈ ಸ್ಟಾಕ್ ಎಕ್ಸ್‌ಛೇಂಜ್‌ನ ಸಂವೇದಿ ಸೂಚ್ಯಂಕ 21000ರ ಗಡಿಯನ್ನೂ ದಾಟಿತ್ತು.
ಇದೇ ಸಂದರ್ಭದಲ್ಲಿ ಷೇರುಗಳಲ್ಲಿ ವ್ಯವಹರಿಸುವ ಮ್ಯೂಚ್ಯುಯಲ್ ಫಂಡ್‌ಗಳ ವ್ಯವಹಾರ ದುಪ್ಪಟ್ಟಾದ ದಾಖಲೆ ಇದೆ. ಷೇರು ಪೇಟೆಯಿಂದ ಕಾಲು ಕಿತ್ತಿದ್ದ ಹೂಡಿಕೆದಾರರು ಈಗಿನ ರ್ಯಾಲಿಗಳಲ್ಲಿ ಮ್ಯೂಚ್ಯುಯಲ್ ಫಂಡ್‌ಗಳ ಮೂಲಕ ಈಕ್ವಿಟಿ (ಷೇರು) ಪೇಟೆಯನ್ನು ಪ್ರವೇಶಿಸುತ್ತಿರುವಂತಿದೆ.

ಆದರೆ, ಈಗಿನ ಏರಿದ ಮಟ್ಟದಲ್ಲಿ ಷೇರುಗಳನ್ನು ಕೊಂಡರೆ, ಭವಿಷ್ಯದಲ್ಲಿ ಪೇಟೆಯ ಅನಿಶ್ಚಿತ ಸ್ಥಿತಿಯಲ್ಲಿ ನಷ್ಟವಾದರೆ ದೊಡ್ಡ ಪೆಟ್ಟೇ ಬೀಳಬಹುದು. ಈಗೇನೋ ಷೇರು ಬೆಲೆಗಳು ಮೇಲ್ಮಟ್ಟದಲ್ಲಿವೆ. ಅದೇ ಶಾಶ್ವತ ಸ್ಥಿತಿಯಲ್ಲ. ಈಗಿನ ಉತ್ಸಾಹದ ಸಮಯದಲ್ಲೇ ಷೇರುಗಳನ್ನು ಮಾರುವುದು ಬುದ್ಧಿವಂತಿಕೆಯಾದರೂ, ಆ ಹಣದಿಂದ ತತ್‌ಕ್ಷಣದಲ್ಲಿ ಬಜಾರಿನಲ್ಲೇ ನೇರವಾಗಿ ಹೂಡುವುದು ಜಾಣತನವಲ್ಲ.

ಕಾದಿರುವ ಅಪಾಯ
ಕಾಂಗ್ರೆಸ್ ಉತ್ತರ ಭಾರತದ ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಲೋಕಸಭೆ ಚುನಾವಣೆಯಲ್ಲೂ ಹೀಗೇ ಆದರೆ ಏನು ಗತಿ? ಆ ಪ್ರಶ್ನೆ ಯುಪಿಎ ನಾಯಕರನ್ನು ಕಾಡುತ್ತಿರಬಹುದು.

ಇನ್ನಳಿದ ದಿನಗಳಲ್ಲಿ ಮತದಾರರನ್ನು ಕೊಡುಗೆಗಳಿಂದ ಆಕರ್ಷಿಸುವುದು ಕಾಂಗ್ರೆಸ್ಸಿನ ತಂತ್ರ. ಆ ತಂತ್ರದಂತೆ, ವಿಪರೀತವಾಗಿ ಸರ್ಕಾರದ ಹಣ ಖರ್ಚಾದರೆ, ಇನ್‌ಫ್ಲೇಷನ್ ದರವೂ ಹೆಚ್ಚಾಗಿ, ಅದರ ಪರಿಣಾಮ ಬೆಲೆ ಏರಿಕೆಯನ್ನು ಜನ ತಡೆದುಕೊಳ್ಳಬಹುದು. ಆದರೆ ಇಡೀ ದೇಶವೇ ಸಂಕಷ್ಟದಲ್ಲಿ ಸಿಕ್ಕಿ ಬೀಳುವ ಅಪಾಯ ಇದೆ.

ಕೊನೆ ಮಾತು
ಔಷಧ ತಯಾರಿಕಾ ಸಂಸ್ಥೆಗಳಲ್ಲಿ (ಒಟ್ಟು ವಾರ್ಷಿಕ ವ್ಯವಹಾರ 72000 ಕೋಟಿ) ಈಗಾಗಲೇ ಹಿಂಜರಿತದ ಲಕ್ಷಣಗಳು ಕಂಡು ಬರುತ್ತಿವೆ. ಈಚೆಗೆ ಸುಪ್ರೀಂ ಕೋರ್ಟ್ ಪ್ರಕಟಿಸಿದ ಒಂದು ತೀರ್ಪಿನಂತೆ, ಹಿಂದೆ ಮಾರಾಟವಾಗದೇ ಉಳಿದ ಔಷಧಿಗಳನ್ನು ಹೊಸ ಬೆಲೆಯಲ್ಲಿ ಮಾರುವಂತಿಲ್ಲ. ಅನೇಕ ಕಂಪನಿಗಳು ದಶಕಗಳಿಂದ ಇಂತಹ ವ್ಯವಹಾರವನ್ನು ನಡೆಸಿಕೊಂಡು ಬಂದಿವೆ. ಅವಕ್ಕೆ ಈಗ ದುಬಾರಿ ದಂಡದ ಭೀತಿ ಎದುರಾಗಿರುವುದು ನಿಜ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್