ಹೂಡಿಕೆಗೆ ಸಾವಿರ ದಾರಿ ಇದೆ. ಯಾರು ಬೇಕಾದರೂ ಹೂಡಿಕೆ ಮಾಡುವ ಅವಕಾಶವಿದೆ. ಷೇರು, ಬಾಂಡ್, ಚಿನ್ನ, ಠೇವಣಿ, ಜೀವವಿಮೆ ಇತ್ಯಾದಿ. ಅದೇ ರೀತಿಯ ಹೂಡಿಕೆಯ ಮತ್ತೊಂದು ಮಾರ್ಗ ಚಿಟ್ ಫಂಡ್. ಇದು ಇತರ ಹೂಡಿಕೆಗಳಿಗಿಂತ ಭಿನ್ನ.
ಚಿಟ್ ಫಂಡ್ಸ್ ಎಂದರೇನು?
ಚಿಟ್ ಫಂಡ್ ಹೂಡಿಕೆಯಲ್ಲಿ ಅಲ್ಪಾವಧಿ ಹೂಡಿಕೆಗಳಿವೆ. ಒಂದು ಗುಂಪು ಅಥವಾ ಸಂಸ್ಥೆ ಈ ವ್ಯವಹಾರವನ್ನು ಆರಂಭಿಸುತ್ತದೆ. ಸಾರ್ವಜನಿಕರಿಗೆ ಹೂಡಿಕೆ ಮಾಡುವ ಅವಕಾಶ ಇರುತ್ತದೆ. ಅದರಿಂದ ಬಂದ ಹಣದಿಂದ ಪ್ರತಿ ತಿಂಗಳು ಹೂಡಿಕೆದಾರ ಬಿಡ್ ಮಾಡಿ ಪಡೆಯಬಹುದಾಗಿದೆ.
ಚಿಟ್ ಫಂಡ್ ಹೂಡಿಕೆ ಸುರಕ್ಷಿತವೇ?
ಚಿಟ್ ಫಂಡ್‌ನಲ್ಲಿ ನಂಬಿಕೆಯೇ ಮುಖ್ಯ. ಹೀಗಾಗಿ ಇದು ಸುರಕ್ಷಿತ ಹೂಡಿಕೆ ಅಲ್ಲ. ಈ ಹೂಡಿಕೆಗೆ ಕಂಪನಿ ಅಥವಾ ಗುಂಪು ನಿಮಗೆ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಯಾವ ಸಮಯದಲ್ಲಾದರೂ ಕಂಪನಿ, ಗುಂಪು ನಿಮ್ಮ ಹಣ ತೆಗೆದುಕೊಂಡು ಓಡಿ ಹೋಗಬಹುದು. ಹಾಗೆಂದು ಎಲ್ಲ ಸಂಸ್ಥೆಗಳೂ ಮೋಸ ಮಾಡುತ್ತವೆ ಎನ್ನಲಾಗದು.
ಚಿಟ್ ಫಂಡ್ ವ್ಯವಹಾರ ಹೇಗೆ?
ಚಿಟ್ ಫಂಡ್‌ನ ಹೂಡಿಕೆ ನಂತರ ಹೂಡಿಕೆದಾರರು ಪ್ರತಿ ತಿಂಗಳೂ ಬಿಡ್ ಮಾಡಿ ಹಣ ತೆಗೆದುಕೊಳ್ಳಬಹುದು. ಅತಿ ಕಡಿಮೆ ಬಿಡ್ ಮಾಡಿದವನು ಆ ತಿಂಗಳು ಹಣ ಪಡೆಯುತ್ತಾನೆ. ಮುಂದಿನ ತಿಂಗಳು, ಕಳೆದ ಬಾರಿ ಬಿಡ್ ಮಾಡಿ ಹಣ ಪಡೆದ ವ್ಯಕ್ತಿ ಬಿಡ್ ಮಾಡಲು ಅನರ್ಹನಾಗಿರುತ್ತಾನೆ.
ಉದಾ: 20 ಮಂದಿ ಹೂಡಿಕೆದಾರರು 20 ಸಾವಿರದಂತೆ ತಿಂಗಳಿಗೆ 1000 ದಂತೆ 20 ತಿಂಗಳು ಹೂಡಿಕೆ ಮಾಡುತ್ತಾರೆ. (20್ಢ1000) ಬಿಡ್ ಆರಂಭವಾಗುತ್ತದೆ. 20 ಜನರು ಬಿಡ್ ಮಾಡುತ್ತಾರೆ. ಯಾರೂ ಈ ತಿಂಗಳು ಕಡಿಮೆ ಬಿಡ್ ಮಾಡುತ್ತಾನೋ ಅವನು ಆ ಹಣ ಪಡೆಯುತ್ತಾನೆ. ಇದರ ಜೊತೆ ಶೇ. 30-40 ತೆರಿಗೆ ರೂಪದಲ್ಲಿ ಕಂಪನಿ ನಿಮ್ಮ ಹಣದಲ್ಲಿ ಕಡಿತಗೊಳಿಸುತ್ತದೆ.
ಚಿಟ್ ಫಂಡ್ಸ್ ಕಂಪನಿಗಳು
ಬಹಳ ವರ್ಷಗಳಿಂದ ಮನೆಮಾತಾಗಿರುವ ಹಲವು ಕಂಪನಿಗಳು ನಮ್ಮ ಸುತ್ತಮುತ್ತ ಕಾರ್ಯನಿರ್ವಹಿಸುತ್ತವೆ. ಅವುಗಳು ತಮ್ಮ ಪಾರದರ್ಶಕ ವ್ಯವಹಾರದಿಂದ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಹೂಡಿಕೆದಾರರು ಸಣ್ಣ ಸ್ಥಳೀಯ ಚಿಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬದಲು ದೊಡ್ಡ ಕಂಪನಿಗಳಲ್ಲಿ ಮಾಡಿದರೆ ಉತ್ತಮ. ಕರ್ನಾಟಕದಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಕೂಡ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದೆ.
- ಆದಿತ್ಯ ವಿ.ಎಸ್. ತೀರ್ಥಹಳ್ಳಿ