ವ್ಯಾಪಾರ ಮತ್ತು ಉದ್ದಿಮೆ ವಲಯ ಎಂದರೆ ಕೇವಲ ಹಣಕಾಸಿನ ಲೆಕ್ಕಾಚಾರ, ಉತ್ಪಾದನೆ ಹೆಚ್ಚಿಸಲು ಹಲವು ರೀತಿಯ ಗುರಿ, ಹೊಸ ಉತ್ಪನ್ನಗಳಿಗೆ ಮಾರುಕಟ್ಟೆ ಶೋಧನೆ ಇತ್ಯಾದಿ ಎಂದರೆ ತಪ್ಪಾದೀತು. ಇಲ್ಲಿಯೂ ಹಲವು ರೀತಿಯ ಭಿನ್ನಾಭಿಪ್ರಾಯಗಳು, ಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟಗಳು ನಡೆಯುತ್ತವೆ.
ನಮ್ಮ ದೇಶದಲ್ಲಿ ಮತ್ತು ವಿಶ್ವಾದ್ಯಂತ ಪ್ರಮುಖ ವಾಣಿಜ್ಯ ವಿವಾದಗಳು ಹಲವು ಕಾರಣಗಳಿಗಾಗಿ ಉದ್ದಿಮೆ ವಲಯದ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಹೋಗಿವೆ. ಅಂಥ ಕೆಲ ಪ್ರಮುಖ ಪ್ರಕರಣಗಳು ಇಲ್ಲಿವೆ.
ವಾಡಿಯಾ V/s ಅಂಬಾನಿ
ದೇಶದ ಉದ್ದಿಮೆ ಜಗತ್ತಿನ ಪ್ರಮುಖರಾಗಿರುವ ವಾಡಿಯಾ ಮತ್ತು ಅಂಬಾನಿ ನಡುವಿನ ವಿವಾದದ ಬಗ್ಗೆ ಹಲವು ಕತೆಗಳಿವೆ. ಕೇಂದ್ರದಲ್ಲಿ ಜನತಾ ಪರಿವಾರ (1977-1979)ದ ಸರ್ಕಾರ ಇದ್ದಾಗ ನುಸ್ಲಿ ವಾಡಿಯಾ ಪ್ಲಾಂಟ್ ಒಂದರ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದರು. ಈ ಯೋಜನೆಗೆ ಸಲ್ಲಿಸಲಾಗಿದ್ದ ಮನವಿಗೆ ಅಧಿಕೃತ ಮುದ್ರೆಯೊತ್ತಬೇಕು ಎಂದಿದ್ದ ಸಂದರ್ಭದಲ್ಲಿ ಜನತಾ ಪರಿವಾರ ಸರ್ಕಾರ ಪತನಗೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿತು. ಹೀಗಾಗಿ, 1981ರ ವರೆಗೆ ಈ ಯೋಜನೆಗೆ ಅನುಮತಿ ಸಿಗುವಲ್ಲಿ ವಿಳಂಬವಾಯಿತು. ಇದೇ ಸಂದರ್ಭದಲ್ಲಿ ಅಂಬಾನಿ ಕೂಡ ಅದೇ ಯೋಜನೆಗೆ ಅನುಮತಿ ಪಡೆದುಕೊಂಡಿದ್ದರು. ಇದರಿಂದಾಗಿ 2 ಉದ್ದಿಮೆ ಸಮೂಹಗಳ ನಡುವೆ ಸಮರ ಆರಂಭವಾಗಲು ಕಾರಣವಾಗಿತ್ತು.
ಶಾ ವಾಲೆಸ್ ಮತ್ತು ಯುಬಿ ಗ್ರೂಪ್
ಯುಬಿ ಗ್ರೂಪ್‌ನ ಮಾಲೀಕ ವಿಜಯ ಮಲ್ಯ 1980ರ ದಶಕದಲ್ಲಿ ಶಾ ವಾಲೇಸ್ ಕಂಪನಿ ಖರೀದಿಗಾಗಿ ಅನಿವಾಸಿ ಭಾರತೀಯ ಉದ್ಯಮಿ ಮನು ಛಾಬ್ರಿಯಾ ಜತೆಗೂಡಲು ಮುಂದಾಗಿದ್ದರು. ಆದರೆ 80ರ ದಶಕದ ಕಠಿಣ ಹಣಕಾಸಿನ ನಿಯಮಗಳಿಂದಾಗಿ ಮಲ್ಯರು ಛಾಬ್ರಿಯಾ ಜತೆಗೂಡಿ ಶಾ ವಾಲೇಸ್ ಖರೀದಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಛಾಬ್ರಿಯಾ ಅವರೇ ಅದನ್ನು ಖರೀದಿಸಿದರು. ಈ ಪ್ರಕರಣ 80ರ ದಶಕದ ಪ್ರಮುಖ ಕಾರ್ಪೊರೇಟ್ ಯುದ್ಧವಾಗಿ ಪರಿಗಣನೆಯಾಗಿತ್ತು. ಹಠ ಬಿಡದ ಮಲ್ಯ 2005ರಲ್ಲಿ ವಿಜಯ ಮಲ್ಯ ನೇತೃತ್ವದ ಕಂಪನಿ ದುಬೈನ ಜಂಬೋ ವಲ್ಡ್ ಹೋಲ್ಡಿಂಗ್ಸ್ ಲಿಮಿಟೆಡ್ ಜತೆಗೂಡಿ ಶಾ ವಾಲೇಸ್ ಅನ್ನು 1,300 ಕೋಟಿ ಮೊತ್ತಕ್ಕೆ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು.
ವಾಡಿಯ ಮತ್ತು ರಾಜನ್ ಪಿಳ್ಳೆ
ನುಸ್ಲಿ ವಾಡಿಯಾ ಮತ್ತು ಬ್ರಿಟಾನಿಯಾ ಕಂಪನಿ ನಡುವಿನ ಹೋರಾಟ ರೋಚಕವಾದದ್ದು. ಬಿಸ್ಕತ್ ಕ್ಷೇತ್ರದ ಕಂಪನಿ ಬ್ರಿಟಾನಿಯಾದ ಮಾಲೀಕತ್ವವನ್ನು ಅಮೆರಿಕದ 'ನಬಿಸ್ಕೋ ಬ್ರಾಂಡ್' ಎಂಬ ಕಂಪನಿ ಹೊಂದಿತ್ತು. ನುಸ್ಲಿ ವಾಡಿಯಾರ ಸ್ನೇಹಿತ ರಾಜನ್ ಪಿಳ್ಳೆ ಬ್ರಿಟಾನಿಯಾದ ಏಷ್ಯಾ ವಹಿವಾಟು ನೋಡಿಕೊಳ್ಳುತ್ತಿದ್ದರು. ಕಂಪನಿ ಖರೀದಿಗೆಂದು ಪಿಳ್ಳೆ ಮೂಲಕ ವಾಡಿಯಾ ಬ್ರಿಟಾನಿಯಾ ಕಂಪನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. ಆದರೆ ಈ ಬೇಡಿಕೆ ತಿರಸ್ಕೃತವಾಗಿತ್ತು. ನಬಿಸ್ಕೋ ಕಂಪನಿ ರಾಜನ್ ಪಿಳ್ಳೆಯವರನ್ನು ಬ್ರಿಟಾನಿಯಾದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಈ ಬೆಳವಣಿಗೆ ವಾಡಿಯಾ ಮತ್ತು ಪಿಳ್ಳೆ ನಡುವೆ ವೈರತ್ವಕ್ಕೆ ಕಾರಣವಾಯಿತು. ಪಿಳ್ಳೆ ಫ್ರಾನ್ಸ್ ಮೂಲದ ಆಹಾರ ಕಂಪನಿ ಡಾನೋನೆ ಜತೆಗೂಡಿ ಉದ್ದಿಮೆ ವಿಸ್ತರಿಸಿದರು. ಒಂದು ಹಂತದಲ್ಲಿ ಈ ಒಪ್ಪಂದ ಮುರಿದು ಬಿತ್ತು. ಇದಾದ ಬಳಿಕ ಪಿಳ್ಳೆ, ವಾಡಿಯಾ ಜತೆಗೂಡಿದರು. ಡಾನೊನೆ ಕಂಪನಿ ಪಿಳ್ಳೆ ಮೋಸ ಮಾಡಿತು ಎಂದು ತಗಾದೆ ತೆಗೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನ್ ಪಿಳ್ಳೆಗೆ ಸಿಂಗಾಪುರದಲ್ಲಿ ಸೆರೆಮನೆ ಶಿಕ್ಷೆ ವಿಧಿಸಲಾಯಿತು. ಅವರು ಅಲ್ಲಿಯೇ ಕೊನೆಯುಸಿರೆಳೆದರು.
ಮೆಕ್ ಡೊನಾಲ್ಡ್ ಮತ್ತು ಬರ್ಗರ್ ಕಿಂಗ್
ಎರಡೂ ಕಂಪನಿಗಳೂ ತಮ್ಮ ಜಾಹೀರಾತಿನ ಮೂಲಕ ಪರಸ್ಪರ ಸಮರ ನಡೆಸುತ್ತಿದ್ದವು. ಒಂದು ಜಾಹೀರಾತಿನಲ್ಲಿ ಬರ್ಗರ್ ಕಿಂಗ್ ಮೆಕ್‌ಡೊನಾಲ್ಡ್‌ನ ಹ್ಯಾಮ್‌ಬರ್ಗರ್‌ನ ಗಾತ್ರದ ಬಗ್ಗೆ ಟೀಕೆ ಮಾಡಿತ್ತು. ಅಕ್ಟೋಬರ್‌ನಲ್ಲಿ ವಿವಿಧ ಮಳಿಗೆಗಳಿಗೆ ಹೆನ್ಸ್ (ಏಜ್ಝಟಿಣ) ಕೆಚಪ್ ಪೂರೈಕೆ ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಅದಕ್ಕೆ ಕಾರಣವೇನಿತ್ತು ಗೊತ್ತೇ? ಬರ್ಗರ್ ಕಿಂಗ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಬೆರ್ನಾರ್ಡೊ ಹೀಸ್ ಹೆನ್ಸ್‌ನ ಮುಖ್ಯಾಧಿಕಾರಿಯಾಗಿದ್ದ!
ಆ್ಯಪಲ್ ಮತ್ತು ಮೈಕ್ರೋಸಾಪ್ಟ್
ಮೈಕ್ರೋಸಾಫ್ಟ್‌ನ ವಿಂಡೋಸ್ 1.0ಕ್ಕೆ ಜಿಯಾಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) ಸಿದ್ಧಪಡಿಸಿಕೊಡಲು ಆ್ಯಪಲ್ ಒಪ್ಪಿಕೊಂಡಿತ್ತು. ವಿಂಡೋಸ್ 2.0ರಲ್ಲಿ ಮೈಕ್ರೋಸಾಫ್ಟ್ ಕೆಲವೊಂದು ಬದಲಾವಣೆಗಳನ್ನು ಮಾಡಿತು. ಇದರಿಂದಾಗಿ ವಿಂಡೋಸ್ 1.0ರಲ್ಲಿದ್ದ ಕೆಲವೊಂದು ವಿಚಾರಗಳೇ ಪುನರಾವರ್ತನೆಯಾಗಿತ್ತು. ಮಾತ್ರವಲ್ಲದೆ ಮೆಕಿಂಟೋಶ್‌ನಲ್ಲಿಯೂ ಕಂಡುಬಂದಿತ್ತು. ಇದರಿಂದಾಗಿ ಆ್ಯಪಲ್ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ತೀರ್ಪು ಮೈಕ್ರೋಸಾಫ್ಟ್ ಪರವಾಗಿಯೇ ಬಂದಿತ್ತು.
ಎನರ್ಜೈಸರ್ ಮತ್ತು ಡ್ಯುರಾಸೆಲ್
ಮಾರುಕಟ್ಟೆಗೆ ಕ್ಷಾರೀಯ ಬ್ಯಾಟರಿಯನ್ನು ಪರಿಚಯಿಸಿದ ಹೆಗ್ಗಳಿಕೆ ಡ್ಯುರಾಸೆಲ್‌ನದ್ದು. ಆದರೆ 1959ರಲ್ಲಿ ಎವರೆಡಿ ಕಂಪನಿ ಎನರ್ಜೈಸರ್ ಬ್ಯಾಟರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಸ್ಪರ್ಧಾತ್ಮಕವಾಗಿ ಎರಡು ಕಂಪನಿಗಳ ನಡುವೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ವಿಚಾರ ಕಳೆದ 50 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಡ್ಯುರಾಸೆಲ್ ಕಂಪನಿ 1970ರಲ್ಲಿ ಮೊಲವನ್ನು ಹೊಂದಿದ ತನ್ನ ಉತ್ಪನ್ನದ ಜಾಹೀರಾತು ಬಿಡುಗಡೆ ಮಾಡಿತ್ತು. ಎನರ್ಜೈಸರ್ ಕೂಡ ಅದಕ್ಕೆ ಪ್ರತಿಯಾಗಿ ಮೊಲದ ಜಾಹೀರಾತನ್ನು ಬಿಡುಗಡೆ ಮಾಡಿ ಡ್ಯುರಾಸೆಲ್‌ಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿತ್ತು.
ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ
ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ನಿಧನದ ಬಳಿಕ ಪುತ್ರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನಡುವೆ ವ್ಯಾಜ್ಯ ಉಂಟಾಯಿತು. ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ನ್ಯಾಚ್ಯುರಲ್ ರಿಸೋರ್ಸಸ್ ಲಿಮಿಟೆಡ್‌ಗೆ (ಆರ್‌ಎನ್‌ಆರ್‌ಎಲ್) ಅನಿಲ ಪೂರೈಕೆ ಮಾಡಬೇಕೆಂದು ಒಪ್ಪಂದವಾಗಿತ್ತು. 17 ವರ್ಷಗಳ ಕಾಲ ಆರ್‌ಎನ್‌ಆರ್‌ಎಲ್‌ನ ದದ್ರಿ ವಿದ್ಯುತ್ ಸ್ಥಾವರಕ್ಕೆ ನೈಸರ್ಗಿಕ ಅನಿಲ ಪೂರೈಸಲು ಒಪ್ಪಂದವಾಗಿತ್ತು. ಕೌಟುಂಬಿಕವಾಗಿ ನಡೆದಿದ್ದ ಈ ಒಪ್ಪಂದ ಅನುಷ್ಠಾನವಾಗದೇ ಇದ್ದ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂಕೋರ್ಟ್ ಮುಖೇಶ್ ಅಂಬಾನಿ ಪರವಾಗಿ ತೀರ್ಪು ನೀಡಿತ್ತು. ಇದಾದ ಬಳಿಕ ಇಬ್ಬರು ಸಹೋದರರು ಅವರವರ ಕ್ಷೇತ್ರಗಳಿಗೆ ಪ್ರವೇಶಿಸದೇ ಇರುವ ಹಳೆಯ ಒಪ್ಪಂದ ರದ್ದುಗೊಳಿಸಿದ್ದಾಗಿ ಘೋಷಿಸಿಕೊಂಡರು. ಹೀಗಾಗಿಯೇ ಇತ್ತೀಚೆಗೆ ಸಹೋದರದ್ವಯರು 1,200 ಕೋಟಿ ಮೊತ್ತದ ದೂರವಾಣಿ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
- ಸದಾಶಿವ ಕೆ.
khandige29@gmail.com