2012ರ ಡಿಸೆಂಬರ್‌ಗೆ (ಕ್ಯಾಲೆಂಡರ್ ವರ್ಷಾಂತ್ಯ ಸಂಬಂಧಿಸಿದಂತೆ, ಔದ್ಯಮಿಕ ಉತ್ಪಾನೆಯ ಸೂಚ್ಯಂಕ 0.7 ಶೇಕಡಾ ಕುಸಿದಿದೆ. (ವಾರ್ಷಿಕ ಲೆಕ್ಕ). ಈಗಾಗಲೇ ಪ್ರಕಟವಾಗಿರುವ ವರದಿಗಳಂತೆ ರಾಷ್ಟ್ರೀಯ ಪ್ರಗತಿಯ ವಾರ್ಷಿಕ ವೇಗ (ಒಟ್ಟು ಉತ್ಪಾದನೆ ಹಾಗೂ ಸೇವೆಗಳ ಮೌಲ್ಯ) ಶೇಕಡಾ ಐದರಷ್ಟಿರಬಹುದಷ್ಟೇ.
ನಿಜ. ಸರ್ಕಾರದ ಅಂಕಿ- ಅಂಶಗಳ ಮಂತ್ರಾಲಯದ ಸೂಚ್ಯಂಕಗಳು ತಪ್ಪು ಎಂದು ವಿತ್ತ ಮಂತ್ರಾಲಯದ ಪಂಡಿತರು ಹೇಳುತ್ತಿದ್ದಾರೆ. ಮಂತ್ರಾಲಯಗಳ ಅಂದಾಜುಗಳ ನಡುವಣ ವ್ಯತ್ಯಾಸದ ಜಗಳ ಏನೇ ಇರಲಿ ಜನರ ಪಾಲಿಗೆ ವಾಸ್ತವ ಸ್ಥಿತಿ ಎಂದರೆ ಸದ್ಯದ ಭವಿಷ್ಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದೇ.
ಈ ಸ್ಥಿತಿಗೆ ಕಾರಣ ತಜ್ಞರು ಪ್ರಕಟಿಸುವ ಸೂಚ್ಯಂಕಗಳಲ್ಲ. ಅದು ಸ್ಥಿತಿಯ ನಗ್ನ ಚಿತ್ರ ಅಷ್ಟೇ. ತಜ್ಞರನ್ನು ದೂರಿದರೆ ಬರುವುದಿಲ್ಲ ಭಾಗ್ಯ. ಪರಿಸ್ಥಿತಿಯನ್ನು ಬದಲಾಯಿಸಬೇಕು.
ಸುಧಾರಣೆ ಹೇಗೆ?
ಪರಿಸ್ಥಿತಿ ಈಗಿನ ಮಟ್ಟಕ್ಕಿಂತ ಕೆಳಗೆ ಹೋಗುವುದಿಲ್ಲ ಎನ್ನುವ ಆಶಾವಾದ ಬೇರೆ. ಆದರೆ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸೇರಿದಂತೆ ಅನೇಕ ತಜ್ಞರು ಹಣದ ಅತಿಪ್ರಸರಣದ ವೇಗ ಕಡಿಮೆಯಾಗದೇ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಅಸಾಧ್ಯ ಎನ್ನುತ್ತಿದ್ದಾರೆ. ಒಂದು ಕಡೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಇನ್ನೊಂದು ಕಡೆ ಆಹಾರ ಧಾನ್ಯಗಳ ಬೆಲೆ ಏರಿಕೆಯ ಭರಾಟೆಯಲ್ಲಿ ಇನ್‌ಫ್ಲೇಷನ್ ಕಡಿಮೆಯಾಗುವುದಾದರೂ ಹೇಗೆ?
ಅದಕ್ಕೆ ಇರುವುದು ಒಂದೇ ಉತ್ತರ: ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಹೇಗೆ, ಎಲ್ಲಿಂದ, ಯಾರು ಮಾಡಬೇಕು?
ಉತ್ತರಕ್ಕೆ ಫೆಬ್ರವರಿ 28ರ ಬಜೆಟ್ ನೋಡಬೇಕು. ಪೇಟೆಯ ಜನರಿಗೂ ಈ ಸುದ್ದಿ ಹೊಡೆತವೇ.
ಗ್ರಾಹಕರಿಗೆ ಎಚ್ಚರಿಕೆ
ಪೇಟೆಯಲ್ಲಿ ಕಳೆದ ಕೆಲವು ತಿಂಗಳಿಂದಲೂ ಕರ್ನಾಟಕ ಬ್ಯಾಂಕ್ ಮತ್ತು ಇತರ ಮೂರು ಕಂಪೆನಿಗಳ ಷೇರು ಬೆಲೆ ವಿನಾಕಾರಣ ಇಳಿಯುತ್ತಿದೆ. ಇದಕ್ಕೆ ಪೇಟೆಯ ಒತ್ತಡ ಕಾರಣವಲ್ಲ. ದಲಾಲ ಬೀದಿಯ ಒಂದು ಕೂಟ ಕಾರಣ ಎನ್ನುತ್ತಾರೆ ವಿಷಯ ಗೊತ್ತಿರುವ ಜನ.
ಆರಿಸಿದ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸುದಂತೆ ಪ್ರತಿಕೂಲವಾದ ವದಂತಿಗಳನ್ನು ಹಬ್ಬಿಸುವುದು, ಬೆಲೆ ಇಳಿಯುವಂತೆ ಮಾಡುವ ದಾರಿಗಳಲ್ಲಿ ಒಂದು. ಈ ತಂತ್ರ ಕರ್ನಾಟಕ ಬ್ಯಾಂಕ್ ಷೇರುಗಳ ಬೆಲೆ ಮೇಲೆ ಆಗಿದೆ.
ವದಂತಿ
ಕೆಲವು ದಲ್ಲಾಳಿಗಳು ತಮ್ಮ ಷೇರುಗಳನ್ನು ಹೆಚ್ಚಾಗಿ ಮಾರುತ್ತಿದ್ದಾರೆ. ಇನ್ನೊಂದು ವದಂತಿ: ಕರ್ನಾಟಕ ಬ್ಯಾಂಕ್ ಒಂದು ದೊಡ್ಡ ಬ್ಯಾಂಕಿನಲ್ಲಿ ವಿಲೀನವಾಗುತ್ತಿದೆ.
ವದಂತಿಗಳನ್ನು ಹಬ್ಬಿಸಲು ಈಗ ಕೆಟ್ಟ ಜನ ಅನುಸರಿಸುತ್ತಿರುವ ಮಾರ್ಗ: ಎಸ್ಸೆಮ್ಮೆಸ್, ಇ-ಮೇಲ್. ಗ್ರಾಹಕರಿಗೆ ಈ ಸನ್ನಿವೇಶದಲ್ಲಿ ಕೂಡಬಹುದಾದ ಎಚ್ಚರಿಕೆ: ಯಾವ ಕಾರಣಕ್ಕೂ ವದಂತಿಗಳನ್ನು ನಂಬಬೇಡಿ. ನಿಮ್ಮ ಎಚ್ಚರದಲ್ಲಿ ನೀವಿರಿ.
ಸಾಮಾನ್ಯರ ನಿರಾಸಕ್ತಿ
2012ರ ಒಟ್ಟಾರೆ ಲೆಕ್ಕವನ್ನು ಗಮನಿಸಿದರೆ, ಸರಾಸರಿ ಲೆಕ್ಕದಲ್ಲಿ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ ಲಾಭ ಬಂದಿರುವುದು ನಿಜ. ಆದರೂ ಫೆಬ್ರವರಿಯಲ್ಲಿ ಸಾಮಾನ್ಯರ ವ್ಯವಹಾರದ ಪ್ರಮಾಣ ಕಡಿಮೆಯಾಗುತ್ತಿದೆ. ಈಗ ಸಾಮಾನ್ಯ ವ್ಯವಹಾರಸ್ಥರು ತಮ್ಮಲ್ಲಿರುವ ಷೇರುಗಳನ್ನು ಮಾರಲು ಮುಂದಾಗಿದ್ದಾರೆ.
ವಿದೇಶಿ ಹೂಡಿಕೆದಾರರು ಹಣವನ್ನು ಹೂಡುತ್ತಿದ್ದರೂ, ಸ್ವದೇಶಿ ಹೂಡಿಕೆ ಕಡಿಮೆಯಾಗುತ್ತಿದೆ. ಈಗಾಗಲೇ ಈ ಪರಿಸ್ಥಿತಿ ಕುರಿತಂತೆ ವಿತ್ತಮಂತ್ರಿ ಚಿದಂಬರಮ್ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈಗಿನ ವ್ಯವಹಾರದ ಸ್ವರೂಪದಲ್ಲಿ ಷೇರುಗಳು ನಿಜವಾಗಲೂ ಕೈ ಬದಲಾಗುತ್ತಿಲ್ಲ. ಎಲ್ಲವೂ ಲೆಕ್ಕಾಚಾರದ ಬಾಬತ್ತೇ. ಇದು ಆರೋಗ್ಯಕ್ಕೆ ಹಾನಿಕರ.
- ಸತ್ಯ