ಇಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸಾಮಾನ್ಯ ಬಜೆಟ್ ಮಂಡಿಸುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ನಮಗೆಷ್ಟು ಸಿಹಿಯಿದೆ, ಏನೆಲ್ಲಾ ಕಹಿ ಇದೆ ಎಂಬ ಕಾತರ, ಆತಂಕ ಎಲ್ಲರಲ್ಲಿದೆ. ಇಷ್ಟಿದ್ದರೆ ಸಾಕೇ? ನಮ್ಮ ದೇಶದ ಬಜೆಟ್ ಬಗ್ಗೆ ಒಂದಿಷ್ಟು ಆಸಕ್ತಿಕರ ವಿಚಾರ ಗೊತ್ತಿದ್ದರೆ ಒಳ್ಳೆಯದಲ್ಲವೇ? ಅವುಗಳನ್ನು ಇಲ್ಲಿ ನೀಡಲಾಗಿದೆ.
ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್‌ನ bougetteಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ 'ಚರ್ಮದ ಬ್ಯಾಗ್'.
ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ. ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.
ಬಜೆಟ್ ಪೇಪರ್‌ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.
ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.
ಕೇಂದ್ರ ಬಜೆಟ್‌ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ
ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು. ಈಸ್ಟ್ ಇಂಡಿಯಾ ಕಂಪನಿಯಿಂದ.
ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.
ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.
ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್. ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.
ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.
'ಮಧ್ಯಂತರ ಬಜೆಟ್' ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).
ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)
1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು
1955-56ರಿಂದ ಬಜೆಟ್ ಪೇಪರ್‌ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು
ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್‌ಲಾಲ್ ನೆಹರೂ. 1958-59ರಲ್ಲಿ ಅವರು ಕೇಂದ್ರ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಅತ್ಯಧಿಕ ಬಜೆಟ್‌ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.
1973-74ರ ಬಜೆಟ್ ಅನ್ನು 'ಬ್ಲ್ಯಾಕ್ ಬಜೆಟ್' ಎನ್ನಲಾಗುತ್ತದೆ. ಏಕೆಂದರೆ, ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು
ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.
2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು. 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.