ಪಾವತಿ ವಿಳಂಬ
ಕ್ರೆಡಿಟ್ ಕಾರ್ಡ್ ಪಾವತಿಯನ್ನು ವಿಳಂಬ ಮಾಡದಿರಿ. ನಿಗದಿತ ಸಮಯದ ಬಳಿಕ ಪಾವತಿಸಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿ 'ಹಳೇ ಬಾಕಿ' ಎಂದು ನಮೂದಾಗುತ್ತದೆ. ನಿಮಗೆ ಸಾಲ ನೀಡುವವರಿಗೆ ಇದರಿಂದ ಅಸಮಾಧಾನವಾಗಬಹುದು. ಏಕೆಂದರೆ, ನೀವು ಮರುಪಾವತಿ ವಿಚಾರದಲ್ಲಿ ಶಿಸ್ತು ಹೊಂದಿಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ.
ಸಾಲ ಕಡಿಮೆಯಿರಲಿ
ಒಂದು ವೇಳೆ ಸಾಲದ ಮಿತಿ 1 ಲಕ್ಷವಾಗಿದ್ದರೆ, ಆ ಮಿತಿಯನ್ನು ಕಾಪಾಡಿಕೊಂಡು ಬನ್ನಿ. ಅದಕ್ಕಿಂತಲೂ ಕಡಿಮೆ ಮೊತ್ತದ ಸಾಲವಿದ್ದರೆ ಇನ್ನೂ ಉತ್ತಮ. ಆಗಾಗ್ಗೆ ಸಾಲ ಮಾಡುತ್ತಿರಬೇಡಿ. ಆಗ ನೀವು ಸಾಲದ ಮೇಲೆ ಹೆಚ್ಚು ಅವಲಂಬಿಸಿದ್ದೀರಿ ಎಂಬ ಭಾವನೆ ಮೂಡುತ್ತದೆ.
ಪೂರ್ಣ ಪಾವತಿ ಮಾಡಿ
ಪ್ರತಿ ತಿಂಗಳೂ ನಿಮ್ಮ ಕ್ರೆಡಿಟ್ ಕಾರ್ಡ್ ವಿವರದಲ್ಲಿ ಕನಿಷ್ಠ ಮೊತ್ತ ಬಾಕಿಯಿರುವ ಬಗ್ಗೆ ತೋರಿಸಬಹುದು. ಕನಿಷ್ಠ ಮೊತ್ತ ಬಾಕಿಯಿರಿಸುವ ಅವಕಾಶ ಇದೆ ಎಂದು ನೀವು ಹಾಗೆ ಮಾಡದಿರಿ. ಸಂಪೂರ್ಣ ಮೊತ್ತವನ್ನು ಪಾವತಿಸಿ. ಬಾಕಿ ಇರಿಸುವುದು ಉತ್ತಮ ಅಭ್ಯಾಸವಲ್ಲ. ಪೂರ್ಣ ಪಾವತಿ ಮಾಡುವುದರಿಂದಾಗಿ ನೀವು ವಿಳಂಬ ಪಾವತಿ ಶುಲ್ಕ, ಬಡ್ಡಿ, ಸೇವಾ ಶುಲ್ಕ ಮತ್ತಿತರ ಹೆಚ್ಚುವರಿ ಹಣ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು.
ಸಾಲ ಮುಕ್ತಾಯ
ಹಿಂದೆ ಮಾಡಿದ್ದಂತಹ ಸಾಲವನ್ನು ನೀವು ಈಗಾಗಲೇ ತೀರಿಸಿರಬಹುದು. ಆದರೆ, ಆ ಲೋನ್ ಅಕೌಂಟ್ ಅನ್ನು ಕ್ಲೋಸ್ ಮಾಡದಿದ್ದರೆ ನೀವು ಇನ್ನೂ ಸಾಲದಲ್ಲಿದ್ದೀರಿ ಎಂದೇ ಕ್ರೆಡಿಟ್ ಸ್ಕೋರ್‌ನಲ್ಲಿ ನಮೂದಾಗಿರುತ್ತದೆ. ಹಾಗಾಗಿ ನಿಮ್ಮ ಸ್ಕೋರ್ ಕಡಿಮೆಯಾಗುತ್ತದೆ. ನೀವು ಸಾಲ ಮರುಪಾವತಿ ಮಾಡಿ ಮುಗಿಸಿದ ತಕ್ಷಣ ಲೋನ್ ಅಕೌಂಟ್ ಕ್ಲೋಸ್ ಮಾಡುವಂತೆ ಸಾಲದ ಅಧಿಕಾರಿಗೆ ಸೂಚಿಸಿರಿ. ಜತೆಗೆ, ಲೋನ್ ಮುಕ್ತಾಯದ ಪತ್ರ ಅಥವಾ ನೋ-ಡ್ಯೂ ಸರ್ಟಿಫಿಕೇಟ್‌ನ ಪ್ರತಿಯೊಂದನ್ನು ಪಡೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅದು ನಿಮಗೆ ಯಾವಾಗ ನೆರವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಸುಸ್ತಿದಾರರಾಗದಿರಿ
ಕ್ರೆಡಿಟ್ ಕಾರ್ಡ್ ಸಾಲ, ವೈಯಕ್ತಿಕ, ಕಾರು, ಗೃಹ ಸಾಲ ಯಾವುದೇ ಆಗಿರಲಿ, ಸಾಲ ಮರುಪಾವತಿ ಮಾಡುವಲ್ಲಿ ತಪ್ಪಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಸಾಲ ಪಾವತಿ ಮಾಡದಿದ್ದರೆ ನಿಮ್ಮ ಸ್ಕೋರ್ 150-200 ಅಂಕಗಳಷ್ಟು ಕಡಿಮೆ ಆಗಬಹುದು. ಕ್ರೆಡಿಟ್ ಕಾರ್ಡ್ ಸಾಲ ಪಾವತಿಸದಿದ್ದರೆ 100 ಅಂಕಗಳಷ್ಟು ಕಡಿಮೆಯಾಗಬಹುದು. ಇವುಗಳು ನೀವು ಬಾಕಿ ಮಾಡಿರುವ ಸಾಲದ ಮೌಲ್ಯ ಹಾಗೂ ಗಾತ್ರವನ್ನು ಅವಲಂಬಿಸಿದೆ.
ತಪ್ಪು ಯಾರದ್ದು?
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದರೆ ಮಾತ್ರ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯ. ಅಂತೆಯೇ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ದೊರೆಯಬೇಕೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ಬ್ಯಾಂಕುಗಳು ಗೃಹ ಸಾಲಕ್ಕೆ ನಿಮಗೆ ಹೆಚ್ಚಿನ ಬಡ್ಡಿ ದರ ವಿಧಿಸುತ್ತಿದೆಯೆಂದಾದಲ್ಲಿ ಅದು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಾದ ತಪ್ಪು ಆಗಿರಲೂಬಹುದು. ಕ್ರೆಡಿಟ್ ಸ್ಕೋರ್ ಕಡಿಮೆ ಮಾಡುವಂತಹ ಅಂಶಗಳಾವುವು? ಅವುಗಳನ್ನು ಹೇಗೆ ತಪ್ಪಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.