ವಾಣಿಜ್ಯ

ಬಿಸಿ ಬಿಸಿ DIESEL

ಪೆಟ್ರೋಲ್ ಬೆಲೆ ಪದೇಪದೇ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಕಾರು ಚಾಲಕರು ಮತ್ತು ಮಾಲೀಕರ ಕಣ್ ಗಳಿಗೆ...

ಪೆಟ್ರೋಲ್ ಬೆಲೆ ಪದೇಪದೇ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಕಾರು ಚಾಲಕರು ಮತ್ತು ಮಾಲೀಕರ ಕಣ್ಗಳಿಗೆ ಆಪ್ಯಾಯವಾಗಿ ಕಂಡುಬಂದದ್ದು ಡೀಸೆಲ್ ಕಾರುಗಳು. ವಿವಿಧ ಕಂಪನಿಗಳ ಶೋರೂಮ್‌ಗಳಲ್ಲಿ  ಡೀಸೆಲ್ ಕಾರುಗಳಿಗೆ ಭರ್ಜರಿಯಾಗಿ ಬುಕಿಂಗ್ ಬೆಳೆಯುತ್ತಿದೆ. ಆದರೆ, ಈಗ ಡೀಸೆಲ್ ಬೆಲೆ ಕೂಡ ಕೆಲ ದಿನಗಳ ಹಿಂದೆ ಪ್ರತಿ ಲೀಟರಿಗೆ 50 ಪೈಸೆಯಷ್ಟು ಹೆಚ್ಚಾಗಿದೆ. ಹೀಗಾಗಿ, ಡೀಸೆಲ್ ಕಾರು ಕೊಂಡವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಗಮನಿಸಿ, ಈ ಒಂದು ವರ್ಷದಲ್ಲಿ 6 ಬಾರಿ ಡೀಸೆಲ್ ದರ ಹೆಚ್ಚಳವಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಬೆಲೆ ಹೆಚ್ಚಳ ದಾರಿ ಈಗ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಡೀಸೆಲ್ ಬೆಲೆ ಇನ್ನೂ ಹೆಚ್ಚಾಗುತ್ತದೆ ಎಂಬ ಬಾಂಬನ್ನೂ ಅವರು ಸಿಡಿಸಿದ್ದಾರೆ. ಈಗಂತೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪರಿಷ್ಕರಣೆಯಾಗುತ್ತಿದ್ದಂತೆ (ಏರಿಕೆ ಅಥವಾ ಇಳಿಕೆ) ನಮ್ಮ ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಈಗಂತೂ ಕಂಪನಿಗಳಿಗೇ ಆ ಸ್ವಾತಂತ್ರ್ಯ ಕೊಡಲಾಗಿದೆ. ಹೀಗಿದ್ದರೂ ದರ ಪರಿಷ್ಕರಣೆಗೆ ಮುನ್ನ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇಳುವುದು ಕಡ್ಡಾಯ!
ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ತಗ್ಗಿದ್ದರಿಂದ ಕೆಲ ದಿನಗಳ ಹಿಂದೆ ಡೀಸೆಲ್ ದರದಲ್ಲಿ ಪ್ರತಿ ಲೀಟರಿಗೆ 50 ಪೈಸೆಯಷ್ಟು ಹೆಚ್ಚಾಗಿದೆ. ಹಾಗಿದ್ದರೆ ಈ ಏರಿಕೆಯ ಓಟಕ್ಕೆ ನಿಯಂತ್ರಣವೇ ಇಲ್ಲವೇ?

ಇದು ಅನಿವಾರ್ಯ
ಹೇಳಿ ಕೇಳಿ ಇದು ಜಾಗತೀಕರಣದ ಜಮಾನ. ವಿಶ್ವದ ಪ್ರತಿಯೊಂದು ದೇಶದ ಹಣಕಾಸು ಪರಿಸ್ಥಿತಿ ಮತ್ತೊಂದು ದೇಶದಲ್ಲಿನ ಬೆಳವಣಿಗೆಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಪೆಟ್ರೋಲಿಯಂ ಉತ್ಪನ್ನಗಳ ಪರಿಸ್ಥಿತಿ ಕೂಡ. ನಮ್ಮ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತಿದ್ದರೂ, ಇತರ ದೇಶಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳಲೇಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಏನಿದ್ದರೂ ನಡೆಯುವುದು ಅಮೆರಿಕನ್ ಡಾಲರ್‌ನಲ್ಲಿ. ಹೀಗಾಗಿ ಅದರ ಮೌಲ್ಯ ಬದಲಾದಂತೆ ಕಚ್ಚಾ ತೈಲದ ಮೌಲ್ಯದಲ್ಲೂ ಬದಲಾಗುತ್ತದೆ. ಹಾಗಾಗಿ ದರದಲ್ಲಿ ವ್ಯತ್ಯಾಸವಾಗುತ್ತದೆ. ಅದು ಬಳಕೆದಾರರಾದ ನಮ್ಮ ನಿಮ್ಮೆಲ್ಲರ ಮೇಲೆ ಬೀಳುತ್ತದೆ. ಇದು ಬಹಳ ಸರಳವಾಗಿ ಕೊಡಬಹುದಾದ ವಿವರಣೆ.

ಹೆಚ್ಚಿದ ಮೌಲ್ಯ ಕಾರಣ
ವಿಶ್ವದ ಮಾರುಕಟ್ಟೆ ಏರಿಳಿತದ ಪರಿಣಾಮವಾಗಿ ರುಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಡೀಸೆಲ್ ಬೆಲೆ ಏರಿಕೆಯಾದದ್ದು ಇದೇ ಕಾರಣಕ್ಕಾಗಿ. ಏಕೆಂದರೆ ತೈಲೋತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸುವ ಸಂದರ್ಭದಲ್ಲಿ ಪಾವತಿಯ ವಿಧಾನ ಡಾಲರ್ ಆಗಿರುತ್ತದೆ. ಅದರ ಮೌಲ್ಯ ಹೆಚ್ಚಾದಾಗ, ನಾವು ಅದನ್ನೇ ಕೊಡಬೇಕಾಗುತ್ತದೆ. ಏಕೆಂದರೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದಾಗ ಪ್ರತಿ ಲೀಟರ್ ಮೇಲೆ ಡೀಸೆಲ್‌ನ ಬೆಲೆ 75 ಪೈಸೆಯಷ್ಟು ಹೆಚ್ಚಾಗುತ್ತದೆ.

2-3 ರು. ಏರಿಕೆ
ಅಂದಹಾಗೆ, ಪ್ರತಿ ಲೀಟರ್ ಡೀಸೆಲ್‌ಗೆ ಬೆಂಗಳೂರಿನಲ್ಲಿ ಸದ್ಯ 55.39 ರುಪಾಯಿ. ಹಾಗಿದ್ದರೂ ಅದು ಕಡಿಮೆಯೇ ಎನ್ನುತ್ತಾರೆ ತೈಲ ಕಂಪನಿ ಅಧಿಕಾರಿಗಳು. ಅವರ ಪ್ರಕಾರ, ಪ್ರತಿ ಲೀಟರ್ ಡೀಸೆಲ್‌ಗೆ 8-10 ರುಪಾಯಿ ನಷ್ಟ ಆಗುತ್ತದೆ. ಅದನ್ನು ತಗ್ಗಿಸಲು ಒಂದೇ ಬಾರಿ 2-3 ರು.ಗಳಷ್ಟು ದರ ಹೆಚ್ಚಿಸಬೇಕು ಎನ್ನುವುದು ಕಂಪನಿಗಳ ಬೇಡಿಕೆ. ಈ ಮೂಲಕ ಪ್ರತಿ ತಿಂಗಳು 50 ಪೈಸೆಯಷ್ಟು ದರ ಹೆಚ್ಚಿಸಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದು ಸಮಜಾಯಿಶಿ.

ಸರ್ಕಾರಕ್ಕೆ ಇಕ್ಕಟ್ಟು
ಡೀಸೆಲ್ ಕಷ್ಟದ ಅರಿವಿದ್ದರೂ ಸರ್ಕಾರಕ್ಕೆ ಒಂದೇ ಬಾರಿ 2-3 ರು. ಹೆಚ್ಚಳ ಮಾಡುವುದು ಸಾಧ್ಯವಿಲ್ಲದ ಮಾತು. ಏಕೆಂದರೆ ಈ ವರ್ಷದ ಮಧ್ಯ ಭಾಗದಿಂದ ಕೊನೆಯ ಭಾಗದ ವರೆಗೆ ಹಲವು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಇದೆ. ಒಂದೇ ಬಾರಿ ದರ ಪರಿಷ್ಕರಣೆ ಎಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆತ್ಮಹತ್ಯೆ ಮಾಡಿಕೊಂಡಂತೆಯೇ. ಹೀಗಾಗಿ, ಕೇವಲ ತೇಪೆ ಹಾಕುವ ಕ್ರಮಗಳತ್ತ ಗಮನ ಹರಿಸಿದೆ.

ದರ ಏರಿದರೆ ಏನಾದೀತು?
ಎಂಥ ಹುಚ್ಚು ಪ್ರಶ್ನೆ ಅಂತ ಕೇಳುತ್ತೀರಾ? ಬಸ್ ಪ್ರಯಾಣ (ನಮ್ಮ ರಾಜ್ಯದಲ್ಲಿ ಈಗಾಗಲೇ ಹೆಚ್ಚಳವಾಗಿದೆ), ವಿದ್ಯುತ್, ಸರಕು ಸಾಗಣೆ, ಅಗತ್ಯ ವಸ್ತುಗಳು, ವಿದ್ಯುತ್... ಹೀಗೆ ಎಲ್ಲ ವಸ್ತು ವಿಚಾರಗಳ ಬೆಲೆ ಹೆಚ್ಚಳವಾಗುತ್ತದೆ. ಏಕೆಂದರೆ ಸರಕು ಸಾಗಣೆ ಮತ್ತು ಪ್ರಯಾಣಕ್ಕೆ ಬಳಸುವ ಹೆಚ್ಚಿನ ವಾಹನಗಳು ಡೀಸೆಲ್ ಬಳಸುತ್ತವೆ. ಹೀಗಾಗಿ, ವೆಚ್ಚದ ಪ್ರಮಾಣ ಹೆಚ್ಚುತ್ತದೆ. ಅದನ್ನು ಜನರಿಗೆ ವರ್ಗಾಯಿಸಿದಾಗ ಈಗಾಗಲೇ ಹಳಿ ತಪ್ಪಿ ಹೋಗಿರುವ ಜೀವನ ಚಕ್ರ ಚಲಿಸಲು ಮತ್ತಷ್ಟು ತೊಂದರೆಯಾಗುತ್ತದೆ.

- ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್